ಸಾರಾಂಶ
ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾಗರದ ಹೆಗ್ಗೋಡು - ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಹಮ್ಮಿಕೊಂಡಿರುವ 3 ದಿನಗಳ ಕೈ ಉತ್ಪನ್ನ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಶುಕ್ರವಾರ ಉದ್ಘಾಟನೆಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪರಿಸರಪೂರಕ ಶುದ್ಧ ವಸ್ತುಗಳ ಬಳಕೆಯಿಂದ ಶುದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.ಅವರು ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾಗರದ ಹೆಗ್ಗೋಡು - ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಹಮ್ಮಿಕೊಂಡಿರುವ 3 ದಿನಗಳ ಕೈ ಉತ್ಪನ್ನ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಪ್ರಕೃತಿಗೆ ಹತ್ತಿರವಾಗಿ ಬದುಕಿದರೆ ಆತನ ದೇಹ, ಮನಸ್ಸು ಎರಡೂ ಸುಸ್ಥಿತಿಯಲ್ಲಿರುತ್ತವೆ ಎಂಬುದು ಸಾಬೀತಾಗಿದೆ. ಈ ಎರಡೂ ಶುದ್ಧವಾಗಿದ್ದರೆ ನಾವು ಬದುಕುವ ಸಮಾಜವೂ ಸಹಜವಾಗಿಯೇ ಶಾಂತವಾಗಿರುತ್ತದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು.ಚರಕ ಸಂಸ್ಥೆ ಪ್ರಕೃತಿಗೆ ಪೂರಕವಾದ ಕೈಮಗ್ಗ ಉತ್ಪಾದನೆಯಲ್ಲಿ ಆಂದೋಲನವನ್ನೇ ಕೈಗೊಂಡಿದೆ. ಇದಕ್ಕೆ ಸಮಾಜ, ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಮಾತನಾಡಿ, ಸುಸ್ಥಿರತೆ, ಗ್ರಾಮರಾಜ್ಯ ಈ ಪದಪುಂಜಗಳು ಕೇವಲ ಪ್ರತಿಕಾ ಹೇಳಿಕೆಗಳಿಗೆ ಸೀಮಿತವಾಗಿವೆ. ಇವುಗಳು ಎಲ್ಲಿಯವರೆಗೂ ನಮ್ಮ ಸರ್ಕಾರದ ನೀತಿ-ನಿರೂಪಣೆಯಲ್ಲಿ ಅಡಕವಾಗುವುದಿಲ್ಲ ಅಲ್ಲಿಯವರೆಗೂ ಉತ್ಪಾದನೆ, ಉದ್ಯೋಗ ನಿರ್ಮಾಣವಾಗುವುದಿಲ್ಲ ಎಂದು ಹೇಳಿದರು.ಚರಕ ಕಳೆದ 29 ವರ್ಷಗಳಿಂದ ನೈಸರ್ಗಿಕ ಬಣ್ಣದ ಬಟ್ಟೆಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ಅವರಿರುವ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಗ್ರಾಮೀಣ ವಲಸೆಯನ್ನು ತಡೆಗಟ್ಟಿದೆ. ಚರಕದ ಈ ಕೆಲಸಕ್ಕೆ ಸಮಾಜವೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ, ಚರಕ ಸಂಸ್ಥೆಯ ಸಿಇಒ ಟೆರೆನ್ಸ್ ಪೀಟರ್, ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ಉಪಸ್ಥಿತರಿದ್ದರು.ಮೇಳದಲ್ಲಿ 10 ಮಳಿಗೆಗಳಿದ್ದು, ಇದೇ 9ರ ಭಾನುವಾರದವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 8.30ವರೆಗೆ ತೆರೆದಿರುತ್ತದೆ.