ಸಾರಾಂಶ
ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಗಳಲ್ಲೊಂದಾದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಘಟಕವಾಗಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಸೋಮವಾರ ನಾರ್ವೆಯ ಮೆಸಸ್ ವಿಲ್ಸನ್ ಎಎಸ್‌ಎ ಸಂಸ್ಥೆಗೆ ನಿರ್ಮಿಲಾಗುತ್ತಿರುವ ೩೮೦೦ ಟಿಡಿಡಬ್ಲ್ಯು ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಹಸ್ತಾಂತರ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಲ್ಪೆ
ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಗಳಲ್ಲೊಂದಾದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಘಟಕವಾಗಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಸೋಮವಾರ ನಾರ್ವೆಯ ಮೆಸಸ್ ವಿಲ್ಸನ್ ಎಎಸ್‌ಎ ಸಂಸ್ಥೆಗೆ ನಿರ್ಮಿಲಾಗುತ್ತಿರುವ ೩೮೦೦ ಟಿಡಿಡಬ್ಲ್ಯು ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಹಸ್ತಾಂತರ ಮಾಡಲಾಯಿತು.ರಾಯಲ್ ನಾರ್ವೇಯನ್ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಿಲರ್ ಮಾರ್ಟಿನ್ ಆಮ್ಡಾಲ್ ಬೋಥೀಮ್ ಅವರು ಈ ಹಡಗನ್ನು ಉದ್ಘಾಟಿಸಿದರು. ವಿಲ್ಸನ್ ಎಎಸ್‌ಎಯ ಮುಖ್ಯ ಹಣಕಾಸು ಅಧಿಕಾರಿ ಐನಾರ್ ಟೋರ್ನೆಸ್ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ಎಸ್. ನಾಯರ್, ತಾಂತ್ರಿಕ ನಿರ್ದೇಶಕ ಬಿಜೋಯ್ ಭಾಸ್ಕರ್, ಉಡುಪಿ-ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಉಪಸ್ಥಿತರಿದ್ದರು.ಯುರೋಪ್‌ನಲ್ಲಿ 130ಕ್ಕೂ ಹೆಚ್ಚು ಸಮುದ್ರ ನೌಕೆಗಳನ್ನು ನಿರ್ವಹಿಸುವ ವಿಲ್ಸನ್ ಎಎಸ್‌ಎ ಸಂಸ್ಥೆಯ ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಸುಮಾರು ೧೫ ದಶಲಕ್ಷ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ.ಈ ಕಂಪನಿಗೆ ಕೊಚ್ಚಿನ್ ಶಿಪ್‌ಯಾರ್ಡ್ ಈಗಾಗಲೇ ಎಂಟು ೬೩೦೦ ಟಿಡಿಡಬ್ಲ್ಯು ಹಡಗುಗಳನ್ನು ನಿರ್ಮಿಸಿದ್ದು, ಒಟ್ಟು ೧೪ ಹಡಗುಗಳ ನಿರ್ಮಾಣದ ಗುತ್ತಿಗೆ ಪಡೆದಿದೆ.ಸೋಮವಾರ ನೀರಿಗಿಳಿಸಲಾದ ಈ ಹಡಗು ೮೯.೪೩ ಮೀ. ಉದ್ದ, ೧೩.೨ ಮೀ. ಅಗಲ ಮತ್ತು ೪.೨ ಮೀ. ಎತ್ತರವಿದೆ. ನೆದರ್ಲೆಂಡ್ಸ್‌ನ ಕೋನೊಶಿಪ್ ಇಂಟರ್‌ನ್ಯಾಷನಲ್ ವಿನ್ಯಾಸಗೊಳಿಸಿದ ಹಡಗುಗಳನ್ನು ಯುರೋಪ್ ಕರಾವಳಿ ನೀರಿನಲ್ಲಿ ಸಾಮಾನ್ಯ ಸರಕುಗಳ ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ - ಎಲೆಕ್ಟ್ರಿಕ್ ನೌಕೆಯಾಗಿ ನಿರ್ಮಿಸಲಾಗಿದೆ ಎಂದು ಮಧು ನಾಯರ್ ತಿಳಿಸಿದರು.