ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭಾ ವತಿಯಿಂದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಬುಧವಾರ ನಗರದ ಸಿಟಿ ಆಸ್ಪತ್ರೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿ, ನಗರಸಭೆ ವತಿಯಿಂದ ಆಯೋಜಿಸಿರುವ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಎಲ್ಲ ಪೌರಕಾರ್ಮಿಕರು ಪಡೆದುಕೊಳ್ಳುವುದರೊಂದಿಗೆ ಆರೋಗ್ಯವಂತರಾಗಿ ಗೈರು ಹಾಜರಿ ಇಲ್ಲದೇ ಕರ್ತವ್ಯ ನಿರ್ವಹಿಸಲು ಕರೆ ನೀಡಿದರು.ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಉಡುಪಿ ನಗರಸಭೆಯು ಪೌರಕಾರ್ಮಿಕರ ಮಾಸ್ಟರ್ ಹೆಲ್ತ್ ಚೆಕಪ್ ಅನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದ್ದು, ನಗರದ ಸ್ವಚ್ಛತಾ ಕಾರ್ಯದ ಹಿತದೃಷ್ಟಿಯ ಜೊತೆಗೆ ಪೌರಕಾರ್ಮಿಕರ ಆರೋಗ್ಯವನ್ನೂ ಸಹ ಪರಿಗಣಿಸಲಾಗಿರುತ್ತದೆ ಎಂದು ತಿಳಿಸಿದರು.ಸಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೆಂಕಟೇಶ್ ಶಾನುಭಾಗ್, ಮಾಸ್ಟರ್ ಆರೋಗ್ಯ ತಪಾಸಣಾ ಶಿಬಿರದಲ್ಲಿನ ಸಂಪೂರ್ಣ ಮಾಹಿತಿಯನ್ನು ನೀಡಿದರು. ಈ ಸಂದರ್ಭ ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ನಗರಸಭೆಯ ಸದಸ್ಯರಾದ ರಶ್ಮಿ ಭಟ್, ಟಿ.ಜಿ. ಹೆಗ್ಡೆ, ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಶ್ವನಾಥ ಶಾನುಭಾಗ್, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಸುರೇಂದ್ರ ಹೋಬಳಿದಾರ್, ಹರೀಶ್ ಬಿಲ್ಲವ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್ ಪ್ರಭು ನಿರೂಪಿಸಿದರು.