ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ಸಂಭ್ರಮದ ವಾತಾವರಣ. ಮಠದಲ್ಲಿ ಸಂಪ್ರದಾಯದಂತೆ ದೀಪಾವಳಿ ಪ್ರಯುಕ್ತ ಮೊದಲದಿನ ತೈಲಾಭ್ಯಂಗ ಹಿನ್ನೆಲೆಯಲ್ಲಿ ಪರ್ಯಾಯ ಶ್ರೀಗಳಿಗೆ ಶಿಷ್ಯರಿಂದ ನಾಮುಂದು ತಾಮುಂದು ಎಂದು ಎಣ್ಣೆ ಹಚ್ಚುವ ಶಾಸ್ತ್ರ ನಡೆಯಿತು.ಬೆಳ್ಳಂಬೆಳಗ್ಗೆ 4 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಶ್ಚಿಮ ಜಾಗರ ಪೂಜೆಯನ್ನು ನಡೆಸಿದರು. ನಂತರ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಚಂದ್ರಶಾಲೆಯಲ್ಲಿ ಆಸೀನರಾದರು ಮತ್ತು ಭಕ್ತರಿಗೆ ಮತ್ತು ಶಿಷ್ಯವರ್ಗದವರ ತಲೆಗೆ ನರಕ ಚತುರ್ದಶಿ ಪ್ರಯುಕ್ತ ಗರಿಕೆಗಳಿಂದ ಎಣ್ಣೆ ಹಚ್ಚಿ ಶಾಸ್ತ್ರ ನಡೆಸಿದರು.ನಂತರ ಶಿಷ್ಯಂದಿರೆಲ್ಲಾ ಸೇರಿ ಉಭಯ ಶ್ರೀಗಳಿಗೆ ಗಂಧೋಪಚಾರ ನಡೆಸಿ ಮೈಗೆಲ್ಲಾ ಎಣ್ಣೆ ಹಚ್ಚಿ ತೀಡಿ ಸಂಭ್ರಮಿಸಿದರು. ಶಿಷ್ಯರಿಗೆ ಇದೊಂದು ಅವಕಾಶವಾದ್ದರಿಂದ ಎಲ್ಲರೂ ಶ್ರೀಗಳಿಗೆ ಎಣ್ಣೆ ಶಾಸ್ತ್ರ ನೆರವೇರಿಸಿದರು. ಶ್ರೀಗಳು ಕೂಡ ಚಟಾಕಿ ಹಾರಿಸುತ್ತಾ ಶಿಷ್ಯರ ಸಂತಸವನ್ನು ಇಮ್ಮಡಿಗೊಳಿಸಿದರು.ರಥಬೀದಿಲ್ಲಿಯೂ ದೀಪಾವಳಿಗೆ ಬೇಕಾದ ದೀಪ, ಹೂವು, ಸಿಹಿತಿಂಡಿ, ಅರಸಿನ ಎಲೆ, ಮೂಡೆ ಎಲೆಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಭಾನುವಾರ ಸಂಜೆ ಸುರಿದ ಭಾರಿ ಮಳೆ ಹೂವಿನ ವ್ಯಾಪಾರಿಗಳ ವ್ಯಾಪಾರಕ್ಕೆ ತಣ್ಣೀರೆರಚಿತ್ತು. ಆದರೆ ಸೋಮಾವಾರ ಬೆಳಿಳಗ್ಗೆಯಿಂದಲೇ ಕೃಷ್ಣಮಠಕ್ಕೆ ಬಂದ ಭಕ್ತರು ರಥಬೀದಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು.