ಸಾರಾಂಶ
ವಾಸುದೇವ ಭಟ್ ಪೆರಂಪಳ್ಳಿ
ಕನ್ನಡಪ್ರಭ ವಾರ್ತೆ ಉಡುಪಿಶ್ರೀ ಕೃಷ್ಣಮಠದ ಗೋಶಾಲೆಯಲ್ಲಿ ತನ್ನ ಆಕರ್ಷಕ ಬೃಹತ್ ಗಾತ್ರದ ದೇಹ, ಬಿಳಿ ಬಣ್ಣ ಮತ್ತು ಅತ್ಯಂತ ಸಾಧು ಸ್ವಭಾವದಿಂದ ಸಾವಿರಾರು ಭಕ್ತರ ಮನಸೂರೆಗೊಂಡಿದ್ದ ಓಂಗೋಲ್ ತಳಿಯ ಎತ್ತು ‘ರಾಮ’ ಮೂರು ದಿನಗಳ ಹಿಂದೆ ಹಠಾತ್ತಾಗಿ ಕೊನೆಯುಸಿರೆಳೆದಿದೆ.2016ರಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯದ ಹೊತ್ತಲ್ಲಿ ಶ್ರೀ ಮಠದಲ್ಲೇ ಜನ್ಮ ತಳೆದ ಒಂಗೋಲ್ ಶುದ್ಧ ತಳಿಯ ಗಂಡು ಕರುವಿಗೆ ಶ್ರೀಗಳೇ ‘ರಾಮ’ ಎಂದು ಹೆಸರಿಟ್ಟಿದ್ದರು. ಎಳೆಯ ವಯಸ್ಸಿನ ತುಂಟಾಟ ಮುದ್ದಾಟಗಳಿಂದ ಪೇಜಾವರ ಉಭಯ ಶ್ರೀಗಳೂ ಸೇರಿದಂತೆ ಎಲ್ಲ ಮಠಾಧೀಶರು, ಮಠದ ಗೋಶಾಲೆಯ ಗೋಪಾಲಕರು ಹಾಗೂ ಭಕ್ತರ ಅಪಾರ ಪ್ರೀತಿ ವಾತ್ಸಲ್ಯಗಳಿಗೆ ಪಾತ್ರನಾಗಿದ್ದ ರಾಮ, ಆಳೆತ್ತರಕ್ಕೆ ಬೆಳೆದು, ನೋಡುವವರಿಗೆ ಒಮ್ಮೆ ಹೆದರಿಕೆಯಾಗುವಂತಿದ್ದರೂ ತನ್ನ ಸಾಧು ಸ್ವಭಾವ ಮತ್ತು ಬಿಳಿ ಮೈಬಣ್ಣ ಗೋಶಾಲೆಯ ಆಕರ್ಷಣೆಯ ಕೇಂದ್ರವಾಗಿದ್ದ. ನಿತ್ಯ ಗೋಪೂಜೆಗೆ ಬರುವ ಸ್ವಾಮೀಜಿಯವರ ಪ್ರೀತಿ ಗಳಿಸಿದ್ದ. ಯಾರಿಗೂ ಹಾಯದೇ, ಹ್ಞೂಂಕರಿಸದೇ ಗೋಶಾಲೆಗೆ ಭೇಟಿ ನೀಡಿದ ಸಾವಿರಾರು ಭಕ್ತರ ಸೆಲ್ಫಿಗಳಲ್ಲಿ ರಾಮ ಸೆರೆಯಾಗುತ್ತಿದ್ದ.ನಿತ್ಯ ಸಂಜೆಯ ವೇಳೆ ಗೋಪಾಲಕರು ರಾಮ ಮತ್ತು ಇನ್ನೊಬ್ಬ ಎತ್ತು ಕೃಷ್ಣರನ್ನು ರಥಬೀದಿಯಲ್ಲಿ ಸುತ್ತಾಡಿಸಿಕೊಂಡು ಬರುತ್ತಿದ್ದುದೂ ಭಕ್ತರ ಕಣ್ಣಿಗೆ ಮುದ ಕೊಡುತ್ತಿತ್ತು. ಬೀದಿಗಳ ವ್ಯಾಪಾರಿಗಳು ಇಬ್ಬರಿಗೂ ಹಣ್ಣು ಹಂಪಲುಗಳನ್ನು ಕೊಟ್ಟು ಮೈದಡವಿ ಕಳುಹಿಸುತ್ತಿದ್ದರು.ಪೇಜಾವರ ಮಠದ ಪರ್ಯಾಯದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥರ ಅಪೇಕ್ಷೆಯಂತೆ ಅಂದಚೆಂದದ ಅಲಂಕಾರಿಕ ಬಟ್ಟೆ ತೊಟ್ಟು ನಿತ್ಯದ ಶ್ರೀ ಕೃಷ್ಣನ ಉತ್ಸವದಲ್ಲೂ ರಥದೊಂದಿಗೆ ಸಾಗಿ ಉತ್ಸವಕ್ಕೆ ಬೇರೆಯೇ ಮೆರುಗು ತಂದಿದ್ದ.
ಮೂರು ದಿನಗಳ ಹಿಂದೆ ಉಳಿದ ಹಸುಗಳ ಜೊತೆ ಮಠದ ಸಮೀಪದ ಮೈದಾನದಲ್ಲಿ ವಿಹರಿಸುತ್ತಿದ್ದಾಗ ಹಠಾತ್ತಾಗಿ ಬಿದ್ದ ರಾಮ ಮತ್ತೆ ಮೇಲೇಳಲೇ ಇಲ್ಲ...