ಸಾರಾಂಶ
ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ (125 ವರ್ಷ)ದ ಆಚರಣೆ ಪ್ರಯುಕ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಆರಂಭಗೊಂಡು 50 ದಿನಗಳು ಪೂರೈಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ (125 ವರ್ಷ)ದ ಆಚರಣೆ ಪ್ರಯುಕ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಆರಂಭಗೊಂಡು 50 ದಿನಗಳು ಪೂರೈಸಿದೆ. ನಿತ್ಯವೂ ಶುಕ್ರವಾರ ಶ್ರೀ ದೇವರಿಗೆ ವಿಶೇಷ ಅಲಂಕಾರ, ಊರ ಪರಊರ ನೂರಾರು ಭಕ್ತರ ಭಾಗವಹಿಸುವಿಕೆಯೊಂದಿಗೆ ಹರಿನಾಮ ಸಂಕೀರ್ತನೆ ನಿರಂತರ ನಡೆಯುತ್ತಿದೆ.ಶುಕ್ರವಾರ ದೇವಳದ ಸುತ್ತು ಪೌಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಪಂಚಮ ವರ್ಧಂತಿ ಕಾರ್ಯಕ್ರಮದ ಅಂಗವಾಗಿ, ಸಾನಿಧ್ಯ ಹವನ, ಶ್ರೀ ದೇವರಿಗೆ ದ್ವಾದಶ ಕಲಶ ಅಭಿಷೇಕ, ಬ್ರಹ್ಮಕಲಶಗಳ ಅಭಿಮಂತ್ರಣ ನಡೆಯಿತು
ಶ್ರೀ ಲಕ್ಷ್ಮೀ ವೆಂಕಟೇಶ ದೇವರು, ಪರಿವಾರದ ದೇವರಾದ ಗಣಪತಿ, ಲಕ್ಷ್ಮೀ, ಹನುಮಂತ, ಗರುಡ ದೇವರಿಗೆ ಅಭಿಷೇಕ ನಡೆಯಿತು. ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು. ರಾತ್ರಿ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಈ ಎಲ್ಲಾ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ವೇದಮೂರ್ತಿ ಶ್ರೀಕಾಂತ್ ಭಟ್, ದೇವಳದ ಪ್ರಧಾನ ಅರ್ಚಕ ದಯಘನ್ ಭಟ್, ವಿನಾಯಕ ಭಟ್, ಮೇಘಶ್ಯಾಮ್ ಭಟ್, ದೀಪಕ್ ಭಟ್, ಗಿರೀಶ್ ಭಟ್, ಮೊಕ್ತೇಸರ ಪಿ. ವಿ. ಶೆಣೈ, ವಿಶ್ವನಾಥ್ ಭಟ್, ವಸಂತ್ ಕಿಣಿ, ಗಣೇಶ್ ಕಿಣಿ ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜ ಬಾಂಧವರು ಹಾಜರಿದ್ದರು.