ಸಾರಾಂಶ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿ । ಪುತ್ತಿಗೆ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ
ಕನ್ನಡಪ್ರಭ ವಾರ್ತೆ ಉಡುಪಿಆಚಾರ್ಯತ್ರಯರಲ್ಲಿ ಓರ್ವರಾದ ದ್ವೈತ ಮತ ಪ್ರತಿಪಾದಕ ಆಚಾರ್ಯ ಮಧ್ವರ ಅಂಚೆಚೀಟಿ ಮಣಿಪಾಲ ಮಾಹೆ ಸಹಯೋಗದೊಂದಿಗೆ ಹೊರತರಲಾಗುತ್ತಿದ್ದು, ಶನಿವಾರ ಸಂಜೆ 4 ಗಂಟೆಗೆ ಕೃಷ್ಣಮಠದ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ.ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಉಪಸ್ಥಿತರಿರುವರು.ಮಹಾನ್ ದಾರ್ಶನಿಕ ಆಚಾರ್ಯ ಮಧ್ವರ ಜ್ಞಾನಮುದ್ರೆಯ ಭಂಗಿಯ ಅಂಚೆಚೀಟಿ ಹೊರತರುವ ಮೂಲಕ ಅವರ ತತ್ವಗಳಿಗೆ ಸರಕಾರದ ಮನ್ನಣೆ ಲಭಿಸಿದಂತಾಗಿದೆ. ಅದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರ ಸಹಕಾರ ಗಣನೀಯ ಎಂದು ಪರ್ಯಾಯ ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.ಶ್ರೀಗಳ 64ನೇ ಜನ್ಮನಕ್ಷತ್ರೋತ್ಸವ:
ಇದೇ ಸಂದರ್ಭ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರ ಮಹೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮ, ಶ್ರೀ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ವಿವಿಧ ಹೋಮಗಳು ನಡೆಯಲಿವೆ.ಶ್ರೀಗಳಿಗೆ ಗೌರವ ಡಾಕ್ಟರೇಟ್: ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಡೆಸಿರುವ ಶ್ರೀಕೃಷ್ಣ ತತ್ವ ಪ್ರಸಾರ ಹಾಗೂ ಅನಿವಾಸಿ ಭಾರತೀಯರು ಮಾತ್ರವಲ್ಲದೇ ವಿದೇಶಿಯರಲ್ಲಿ ಹಿಂದೂ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಆಫ್ರಿಕಾದ ಮೈಲ್ಸ್ ಲೀಡರ್ ಶಿಪ್ ಯೂನಿವರ್ಸಿಟಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.