ಸಾರಾಂಶ
ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಶ್ರೀಮನ್ ಮಧ್ವಾಚಾರ್ಯರ ಅದೃಶ್ಯ ಸನ್ನಿಧಿಯಲ್ಲಿ ಹಾಗೂ ಶ್ರೀ ಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು. ಈ ಪ್ರಯುಕ್ತ ಕೃಷ್ಣ ಮಠವನ್ನು ಹಾಗೂ ಅನಂತೇಶ್ವರ ದೇವಾಲಯವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಶ್ರೀಮನ್ ಮಧ್ವಾಚಾರ್ಯರ ಅದೃಶ್ಯ ಸನ್ನಿಧಿಯಲ್ಲಿ ಹಾಗೂ ಶ್ರೀ ಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು. ಈ ಪ್ರಯುಕ್ತ ಕೃಷ್ಣ ಮಠವನ್ನು ಹಾಗೂ ಅನಂತೇಶ್ವರ ದೇವಾಲಯವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.ಶ್ರೀ ಅನಂತೇಶ್ವರ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ನೂರಾರು ವಿಪ್ರ ಬಾಂಧವರು ಪಾರಾಯಣ ಮಾಡುತ್ತಿರುವಂತೆ, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವಾಯುಸ್ತುತಿ ಪಾರಾಯಣದೊಂದಿಗೆ ಮಧು ಅಭಿಷೇಕವನ್ನು ಮಾಡಿದರು. ನಂತರ ಉಭಯ ಶ್ರೀಪಾದರು ಮಹಾಪೂಜೆಯನ್ನು ಮಾಡಿ ಆಚಾರ್ಯ ಮಧ್ವರಿಗೆ ದಂಡೋದಕವನ್ನು ನೀಡಿದರು.ಆಚಾರ್ಯ ಮಧ್ವರು, ಹನುಮಂತ ದೇವರ ಅವತಾರದ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದ ಪ್ರಾಣದೇವರಿಗೆ ಆಚಾರ್ಯ ಮಧ್ವರ ಅಲಂಕಾರವನ್ನು ಸುಂದರವಾಗಿ ಮಾಡಲಾಗಿತ್ತು. ಸಾವಿರಾರು ಮಂದಿ ಈ ವೈಭವವನ್ನು ಕಣ್ತುಂಬಿಕೊಂಡರು.ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪುತ್ತಿಗೆ ಕಿರಿಯ ಶ್ರೀಪಾದರು ಶ್ರೀ ಗೋಪಾಲಕೃಷ್ಣ ಅಲಂಕಾರವನ್ನು ಮಾಡಿ ಆರತಿಯನ್ನು ಬೆಳಗಿದರು. ನಂತರ ಪರ್ಯಾಯ ಶ್ರೀಪಾದರು ಮಹಾ ಪೂಜೆಯನ್ನು ನೆರವೇರಿಸಿದರು.ಮಧ್ವ ನವಮಿಯ ಪ್ರಯುಕ್ತ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಷ್ಣು ಸಹಸ್ರನಾಮ ಚಿಂತನೆ ಮತ್ತು ವಿಪ್ರರಿಂದ ಪಾರಾಯಣ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಡೆಯಿತು. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.ಈ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ರತೀಶ್ ತಂತ್ರಿ, ವಿಷ್ಣು ಮೂರ್ತಿ, ವಿದ್ವಾನ್ ಗೋಪಾಲ ಆಚಾರ್ಯ, ರಮೇಶ್ ಭಟ್, ರವೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.