ಸಾರಾಂಶ
ಉಡುಪಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಜಯಂತಿ ಪ್ರಯುಕ್ತ ‘ಮಹಿಳಾ ಆರೋಗ್ಯ ಸಂಕಲ್ಪ’ ನಿಮಿತ್ತ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡವೂರಿನ ಹಾಳೆಕಟ್ಟೆಯ ವಠಾರದಲ್ಲಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ನೀಡಲಾಯಿತು.ಈ ಸಂದರ್ಭ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ಮನೆಯ ಎಲ್ಲಾ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯ ಇದೆ. ಇಂದಿನ ದಿನಗಳಲ್ಲಿ ಗರ್ಭಕೋಶ ಸಂಬಂಧ ಕಾಯಿಲೆಗಳು, ಸ್ತನ ಕ್ಯಾನ್ಸರ್ ಎಲ್ಲವೂ ಜಾಸ್ತಿ ಆಗುತ್ತಿದೆ. ಮಹಿಳೆಯರು ತಮ್ಮ ಆರೋಗ್ಯದಲ್ಲಿ ಏರುಪೇರು ಆದಾಗ ಈ ಎಲ್ಲದರ ಬಗ್ಗೆ ಗಮನಹರಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜೊತೆಗೆ ತಮ್ಮ ಋತುಚಕ್ರದ ಸಮಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಉಡುಪಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ ನೆರ್ಗಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಧ್ಯಾ ತಿಲಕ್ ರಾಜ್, ಸುಂದರಿ, ಶಹನಾಜ್, ಅರ್ಚನಾ ದೇವಾಡಿಗ, ಸುಪ್ರಿತಾ ಮುಂತಾದವರಿದ್ದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಸ್ವಾಗತ ಕೋರಿದರು. ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.