ಉಡುಪಿ: ಎಂಜಿಎಂ ಕಾಲೇಜು ಅಮೃತ ಮಹೋತ್ಸವಕ್ಕೆ ಚಾಲನೆ

| Published : Nov 30 2024, 12:47 AM IST

ಸಾರಾಂಶ

ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಕಾಲೇಜಿನ ಸ್ಥಾಪಕ ಟಿ.ಎಂ.ಎ. ಪೈ ಪುತ್ಥಳಿಗೆ ಪುಷ್ಪ ನಮನಗೈದು, ನೂತನ ಟಿ. ಮೋಹನದಾಸ ಪೈ ಮೆಮೋರಿಯಲ್‌ ಕೌಶಲ್ಯಾಭಿವೃದ್ಧಿ ಕೇಂದ್ರ ‘ಅಮೃತ ಸೌಧ’ವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಶುಕ್ರವಾರ ಆರಂಭವಾಯಿತು. ಎಂ.ಜಿ.ಎಂ. ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಕಾಲೇಜಿನ ಸ್ಥಾಪಕ ಟಿ.ಎಂ.ಎ. ಪೈ ಪುತ್ಥಳಿಗೆ ಪುಷ್ಪ ನಮನಗೈದು, ನೂತನ ಟಿ. ಮೋಹನದಾಸ ಪೈ ಮೆಮೋರಿಯಲ್‌ ಕೌಶಲ್ಯಾಭಿವೃದ್ಧಿ ಕೇಂದ್ರ ‘ಅಮೃತ ಸೌಧ’ವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಮೃತ ಮಹೋತ್ಸವ ಪ್ರಯುಕ್ತ ಕಾಲೇಜಿನ‌ ವಿವಿಧ ವಿಭಾಗಗಳಿಂದ ಆಯೋಜಿಸಲಾಗಿರುವ ವಿಶೇಷ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು.

ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚಿಸಿ, ಎಂಜಿಎಂ ಕಾಲೇಜು ವಿದ್ಯಾರ್ಥಿ ಶ್ರೇಯೋಭಿವೃದ್ಧಿಗಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಶ್ರೇಷ್ಠ ಸಾಧನೆ ಮಾಡಿದೆ. ಈ ಕಾಲೇಜು ಹಂತಹಂತವಾಗಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಅದರ ನಿರಂತರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಗೆ ಕರಾವಳಿ, ಮಣಿಪಾಲ, ಕೃಷ್ಣ ದೇಗುಲಗಳಂತೆ ಎಂಜಿಎಂ ಕಾಲೇಜು ಕೂಡ ಒಂದು ಆಧಾರ ಸ್ತಂಭವಾಗಿದೆ ಎಂದರು.ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ಮಾತನಾಡಿ, ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ವೃತ್ತಿಪರರ ಅಗತ್ಯ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನೂತನ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಸ್ಥಾಪನೆ ಅರ್ಥಪೂರ್ಣ ಎಂದು ಹೇಳಿದರು.ಪೋಸ್ಟಲ್ ಕವರ್ ಬಿಡುಗಡೆ:

ಅಮೃತ ಮಹೋತ್ಸವ ಪ್ರಯುಕ್ತ ಉಡುಪಿ ಅಂಚೆ ಕಚೇರಿ ವ್ಯವಸ್ಥಾಪಕ ರಮೇಶ್ ಪ್ರಭು, ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು.ಅಕಾಡೆಮಿಯ ಕಾರ್ಯದರ್ಶಿ ಸಿಎ ಬಿ.ಪಿ. ವರದರಾಯ ಪೈ, ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಬೆಂಗಳೂರು ಉತ್ತರ ವಿ.ವಿ.ಯ ಉಪಕುಲಪತಿ ನಿರಂಜನ ವಾನಳ್ಳಿ, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಡಾ.ಟಿ.ಎಂ.ಎ ಫೌಂಡೇಶನ್‌ ಅಧ್ಯಕ್ಷ ಟಿ.ಅಶೋಕ್ ಪೈ, ಕಾಲೇಜು ಟ್ರಸ್ಟ್‌ನ ವಿಶ್ವಸ್ಥೆ ವಸಂತಿ ಆರ್.ಪೈ ಭಾಗವಹಿಸಿದ್ದರು.ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ ವಂದಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಅಶ್ವಿನಿ ಸಿ. ಆಚಾರ್ಯ ಮತ್ತು ಸಂಸ್ಕೃತ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಎಂ. ನಿರೂಪಿಸಿದರು.