ಸಾರಾಂಶ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಸಂಪರ್ಕದ ಕುಡಿಯುವ ನೀರಿನ ದರವನ್ನು ಕಡಿತಗೊಳಿಸಲಾಗಿದ್ದು, ಡಿ.1ರಿಂದ ಜಾರಿಯಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಸಂಪರ್ಕದ ಕುಡಿಯುವ ನೀರಿನ ದರವನ್ನು ಕಡಿತಗೊಳಿಸಲಾಗಿದ್ದು, ಡಿ.1ರಿಂದ ಜಾರಿಯಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.ನಗರಸಭೆಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ದರ ಏರಿಕೆ ಮಾಡಿದ್ದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿತ್ತು. ಈ ಹಿನ್ನಲೆಯಲ್ಲಿ ಉಡುಪಿ ಜನತೆಯ ಹಿತದೃಷ್ಟಿಯಿಂದ ಗೃಹ ಬಳಕೆಯ ಸಂಪರ್ಕಕ್ಕೆ ನೀರಿನ ಬಳಕೆಗೆ ಅನುಗುಣವಾಗಿ ಶೇ.18 ರಿಂದ ಶೇ.25ರ ವರೆಗೂ ದರ ಕಡಿತ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.ನಗರಸಭೆಯ ಕುಡಿಯುವ ನೀರಿನ ಸಂಪರ್ಕದ ಗೃಹ ಬಳಕೆಯ ಮಾಸಿಕ ಕನಿಷ್ಟ ದರವನ್ನು 88 ರು. ಗಳಿಂದ 72 ರು.ಗಳಿಗೆ ಇಳಿಸಲಾಗಿದೆ. 8000 ಲೀಟರ್ ವರೆಗಿನ ನೀರಿನ ಬಳಕೆಗೆ ಪ್ರತಿ 1000 ಲೀಟರ್‌ಗೆ 11 ರು. ನಿಂದ 9 ರು. ಗೆ, 15000 ಲೀ. ವರೆಗೆ ದರವನ್ನು 15 ರು.ನಿಂದ 12 ರು.ಗೆ ಮತ್ತು 25,000 ಲೀ. ವರೆಗಿನ ದರವನ್ನು 20 ರು.ನಿಂದ 15 ರು.ಗೆ ಇಳಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕದ ಬಳಕೆ ಶುಲ್ಕಗಳಲ್ಲೂ ಇಳಿಕೆ ಮಾಡಲಾಗಿದೆ.ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಪ್ರತಿ ತಿಂಗಳು 45,000 ಲೀಟರ್ ನೀರನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಶಾಸಕರು ಮತ್ತು ಅಧ್ಯಕ್ಷರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.