ಸಾರಾಂಶ
Udupi murderer arrested
ಕನ್ನಡಪ್ರಭ ವಾರ್ತೆ ಬೆಳಗಾವಿ
ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಮಂಗಳವಾರ ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಅರುಣ್ ಚೌಗಲೆ ಬಂಧಿತ ಆರೋಪಿ. ಪ್ರವೀಣ ಸಿಆರ್‌ಪಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕುಡಚಿಯ ನೀರಾವರಿ ಇಲಾಖೆ ಅಧಿಕಾರಿ ಆಗಿರುವ ಅವರ ಸಂಬಂಧಿ ಮನೆಯಲ್ಲಿ ಆರೋಪಿ ಪ್ರವೀಣ ನೆಲೆಸಿದ್ದ. ಮೊಬೈಲ್ ಟವರ್ ಲೋಕೇಶನ್ ಆಧರಿಸಿ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಪ್ರವೀಣನನ್ನು ಉಡುಪಿಗೆ ಪೊಲೀಸರು ಕೊಂಡೊಯ್ದಿದ್ದಾರೆ. ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಪ್ರವೀಣ್ ಭೀಕರವಾಗಿ ಕೊಲೆ ಮಾಡಿರುವ ಆರೋಪವಿದೆ. ಹಸೀನಾ, ಅಫ್ನಾನ್, ಅಯ್ನಾಝ್, ಹಾಸೀಂ ಕೊಲೆಯಾಗಿದ್ದರು.