ಇಲ್ಲಿನ ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಆಂಜನೇಯ ದೇವರ ಗುಡಿ ಹಾಗೂ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ 3ರಿಂದ 7ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿ : ಇಲ್ಲಿನ ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಆಂಜನೇಯ ದೇವರ ಗುಡಿ ಹಾಗೂ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ 3ರಿಂದ 7ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅವರು ಬುಧವಾರ ಇಂದ್ರಾಳಿ ಆಂಜನೇಯ ದೇವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಹಸಿರುಹೊದ್ದ ಕಾಡಿನ ಮಧ್ಯೆ ಸುಮಾರು 11ನೇ ಶತಮಾನದಲ್ಲಿ ಈ ಗುಡಿಯನ್ನು ಶಿರೂರು ಮಠದ ಶ್ರೀಗಳು ನಿರ್ಮಾಣ ಮಾಡಿದ್ದಾರೆ ಎಂಬ ಐತಿಹ್ಯವಿದೆ. ಚ್ಯವನ ಮುನಿಗಳು ತಪಸ್ಸು ಮಾಡಿ ನಾರಾಯಣ ದೇವರನ್ನು ಒಲಿಸಿಕೊಂಡ, ಇಂದ್ರ ಮತ್ತು ಶಚಿ ದೇವಿ ಸಮಾಗಮಗೊಂಡ ಸ್ಥಳ ಇದು, ಆದ್ದರಿಂದ ಇಂದ್ರನ ರಾಣಿ ಇಂದ್ರಾಣಿಯ ಹೆಸರನ್ನು ಪಡೆದುಕೊಂಡಿದೆ ಎಂದು ಸ್ಥಳ ಪುರಾಣಗಳು ಹೇಳುತ್ತವೆ. ಪಂಚತೀರ್ಥಗಳಿರುವ ಇಲ್ಲಿನ ತೀರ್ಥದಲ್ಲಿ ಹುಟ್ಟುವ ನದಿ ಮುಂದೆ ಇಂದ್ರಾಣಿ ನದಿಯಾಗಿ ಉಡುಪಿ ನಗರದಲ್ಲಿ ಹರಿಯುತ್ತಿದೆ ಎಂದರು.3ರಂದು ಸಂಜೆ 6ರಿಂದ ವಾಸ್ತುಪೂಜಾದಿಗಳು, 4 ರಂದು ಬೆಳಿಗ್ಗೆ 6.48ರಿಂದ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. 5ರಂದು ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಆ ದಿನ ಸಂಜೆ 7ರಿಂದ ಮಹಾರಂಗ ಪೂಜೆ ಜರುಗಲಿದೆ ಎಂದರು. ಎ.6ರಂದು ಸಂಜೆ 6ರಿಂದ ನಾಗಗುಡಿಯಲ್ಲಿ ವಾಸ್ತು, ರಕ್ಷಾ ಹೋಮ, ಬಿಂಬಾಧಿವಾಸ, 7 ರಂದು ನಾಗದೇವರ ಪುನಃ ಪ್ರತಿಷ್ಠಾದಿಗಳು ಆಶ್ಲೇಷ ಬಲಿ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನೆರವೇರಲಿದೆ. ಈ ಕಾರ್ಯಕ್ರಮಗಳಲ್ಲಿ ಅಷ್ಟ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮ: ಪ್ರತಿದಿನ ಸಂಜೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎ.4ರಂದು ಕಲಾಮಯಂ ತಂಡದಿಂದ ಜಾನಪದ ಕಲರವ, 5 ರಂದು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನ ಛಾಯಾನಂದನ, 6ರಂದು ಮಣಿಪಾಲ ಗುರುವಸಂತಿ ಸಾಂಸ್ಕೃತಿಕ ವೇದಿಕೆಯಿಂದ ಪೌರಾಣಿಕ ನಾಟಕ ವಿಕ್ರಮ ಬಜರಂಗಿ, 7ರಂದು ಶ್ರೀಯಕ್ಷನಿಧಿ ಮೂಡುಬಿದರೆ ಅವರಿಂದ ಯಕ್ಷಗಾನ - ವೀರಮಣಿ ಕಾಳಗ, ಜೊತೆಗೆ 5 ದಿನಗಳಲ್ಲಿ ನೃತ್ಯ ವೈಭವ, ಭಜನಾಮೃತಂ, ಭಕ್ತಿ ಸಂಗೀತ ತಾಳಮದ್ದಲೆ ಕೂಟ, ಭಕ್ತಿ ಗಾನ, ನೃತ್ಯಾಮೃತಂ, ನಿರಂತರ ಭಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಮುಖ್ಯಪ್ರಾಣ ದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಇಂದ್ರಾಳಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಕುಶಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷ ಸಾಧು ಶೆಟ್ಟಿ, ಮಾಧ್ಯಮ ಮತ್ತು ಜಾಹಿರಾತು ಸಮಿತಿ ಸಂಚಾಲಕ ರವಿ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಮಂಚಿ, ಉಟೋಪಚಾರ ಸಮಿತಿ ಸಂಚಾಲಕ ರಾಕೇಶ ರೈ, ಮುಖ್ಯ ಅರ್ಚಕ ಗೋಪಾಲ ಭಟ್ ಉಪಸ್ಥಿತರಿದ್ದರು.
ಹೊರೆಕಾಣಿಕೆ ಮೆರವಣಿಗೆ: ಇಂದ್ರಾಳಿಯ ಪಂಚದುರ್ಗಾಪರಮೇಶ್ವರಿ ದೇವಾಲಯದ ಪರಿಸರದಲ್ಲಿರುವ ಶ್ರೀ ಮುಖ್ಯಪ್ರಾಣ - ನಾಗದೇವರ ಗುಡಿಗಳ ಜೀರ್ಣೋದ್ಧಾರದ ಪ್ರಯುಕ್ತ ಪುನಃ ಪ್ರತಿಷ್ಠಾಬ್ರಹ್ಮಕಲಶೋತ್ಸವದಂಗವಾಗಿ ಬುಧವಾರ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಕೃಷ್ಣಮಠದ ರಥಬೀದಿಯಿಂದ ಹೊರಟ ಈ ಮೆರವಣಿಗೆಗೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಇಂದ್ರಾಳಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಕುಶಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷ ಸಾಧು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್, ಪ್ರಮುಖರಾದ ನಾಗೇಶ್ ಹೆಗ್ಡೆ, ಪುರುಷೋತ್ತಮ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು.