ಸಾರಾಂಶ
ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳ ವತಿಯಿಂದಲೂ ‘ಮನೆಮನೆ ಪೊಲೀಸ್’ ಅಭಿಯಾನ ಕೈಗೊಳ್ಳಲಾಯಿತು. ಪೊಲೀಸರು ಮನೆಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಸೈಬರ್ ಅಪರಾಧ, ಮಾದಕ ವಸ್ತು, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.
ವಿವಿಧ ಕಾಯ್ದೆಗಳ ಮನವರಿಕೆ, ಜನರಿಂದ ಅಹವಾಲು ಸ್ವೀಕಾರ, ಅಪರಾಧಗಳ ಬಗ್ಗೆ ಜಾಗೃತಿ
ಕನ್ನಡಪ್ರಭ ವಾರ್ತೆ ಉಡುಪಿ‘ಮನೆ ಮನೆಗೆ ಪೊಲೀಸ್’ ಎಂಬ ರಾಜ್ಯ ಸರ್ಕಾರದ ವಿನೂತನ ಪರಿಕಲ್ಪನೆಯ ಕಾರ್ಯಕ್ರಮವನ್ನು ಶುಕ್ರವಾರ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ, ನಿಮ್ಮ ತಂಡಗಳ ಕಾರ್ಯಕ್ಕೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ಎಸ್. ನಾಯ್ಕ ಮತ್ತು ಪರಮೇಶ್ವರ ಹೆಗಡೆ, ಎಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಮತ್ತು ಉಡುಪಿ ಸಂಚಾರ ಠಾಣೆಯ ಪಿಎಸ್ಐಯವರಾದ ಭರತೇಶ್, ನಾರಾಯಣ, ಪ್ರಕಾಶ್ ಸಾಲಿಯಾನ್, ಹುಸೇನ್ ಸಾಬ್ ಮತ್ತು ಸಿಬ್ಬಂದಿ ಹಾಜರಿದ್ದರು.ಇದೇ ಸಂದರ್ಭದಲ್ಲಿ ಉಡುಪಿ ಉಪ ವಿಭಾಗದ ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳ ವತಿಯಿಂದಲೂ ‘ಮನೆಮನೆ ಪೊಲೀಸ್’ ಅಭಿಯಾನ ಕೈಗೊಳ್ಳಲಾಯಿತು. ಪೊಲೀಸರು ಮನೆಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಸೈಬರ್ ಅಪರಾಧ, ಮಾದಕ ವಸ್ತು, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮನೆಯಲ್ಲಿರುವವರ ಹೆಸರು, ಮೊಬೈಲ್ ನಂಬರ್ ಪಡೆದುಕೊಳ್ಳಲಾಯಿತು. ಸಾರ್ವಜನಿಕರರಿಂದ ಅವರ ದೂರು - ದುಮ್ಮಾನಗಳನ್ನು ಮತ್ತು ಕೋರಿಕೆಗಳನ್ನು ಸ್ವೀಕರಿಸಲಾಗಿರುತ್ತದೆ.
-------------------ಸಾರ್ವಜನಿಕರಿಂದ ಮೆಚ್ಚುಗೆ
ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಠಾಣೆಯಿಂದ ರಚಿಸಲಾಗಿರುವ ತಂಡದಲ್ಲಿ ಪಿಐ/ಪಿಎಸ್ಐ, ಎಎಸ್ಐ, ಮಹಿಳಾ ಮತ್ತು ಪುರುಷ ಸಿಬ್ಬಂದಿಗಳಿರುತ್ತಾರೆ. ಶುಕ್ರವಾರ ಉಡುಪಿ ನಗರ ಠಾಣೆಯ 28, ಮಣಿಪಾಲ 45, ಬ್ರಹ್ಮಾವರ 30 ಮತ್ತು ಕೋಟ 25 ಮನೆಗಳಿಗೆ ಭೇಟಿ ನೀಡಲಾಗಿದೆ. ಈ ಭೇಟಿಯ ವೇಳೆ ಸಾರ್ವಜನಿಕರು ಪೊಲೀಸರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ. ಈ ಕಾರ್ಯಕ್ರಮ ಪ್ರತಿ ಮನೆಗೆ ತಲುಪ ಬೇಕಾಗಿರುವುದರಿಂದ ಕನಿಷ್ಟ 3 ರಿಂದ 3.5 ತಿಂಗಳ ವರೆಗೆ ಅಭಿಯಾನ ಪ್ರತಿದಿನ ಚಾಲಿಯಲ್ಲಿರುತ್ತದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.