ಸಾರಾಂಶ
ಉಡುಪಿ : ನಮ್ಮ ಸಹೋದ್ಯೋಗಿಗಳೇ ನಮ್ಮ ಆಸ್ತಿ. ಅಂಚೆ ಇಲಾಖೆಯ ವಿವಿಧ ಯೋಜನೆ ಯೋಚನೆಗಳನ್ನು, ವಿನೂತನ ಪರಿಕಲ್ಪನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಸವಲತ್ತುಗಳ ಅಧಿಕೃತ ಏಜೆಂಟ್ ಅವರ ಪಾತ್ರ ಮಹತ್ತರವಾದದ್ದು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಅಂಚೆ ವಿಭಾಗದ ವಿಭಾಗೀಯ ಮಟ್ಟದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಅಂಚೆ ಇಲಾಖೆ ಹತ್ತು ಹಲವು ಹೊಸತನಗಳೊಂದಿಗೆ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಲಿದೆ ಎಂದು ಹೇಳಿದರು. ದೀಪ ಬೆಳಗಿಸಿ ಉದ್ಘಾಟನೆ ನಡೆಸಿಕೊಟ್ಟ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಉಡುಪಿ ಅಂಚೆ ವಿಭಾಗ ಗ್ರಾಹಕರ ಸೇವೆಗೆ ಸದಾ ಮುಂಚೂಣಿಯಲ್ಲಿ ಇರುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು.
ವಿಶ್ರಾಂತ ಹಿರಿಯ ಅಂಚೆ ಅಧೀಕ್ಷಕ ರಾಜಶೇಖರ ಭಟ್ ಉಡುಪಿ ಅಂಚೆ ವಿಭಾಗವನ್ನು ಶ್ಲಾಘಿಸಿದರು. ನಿಕಟಪೂರ್ವ ಹಿರಿಯ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ (ಆರ್) ದಯಾನಂದ ದೇವಾಡಿಗ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ(ಎಚ್ ಕ್ಯೂ) ವಸಂತ್ ಪ್ರಸ್ತಾವನೆ ನಡೆಸಿಕೊಟ್ಟರು. ಉಡುಪಿ ದಕ್ಷಿಣ ಸಹಾಯಕ ಅಂಚೆ ಅಧೀಕ್ಷಕ ಹರೀಶ್ ರವರು ಧನ್ಯವಾದವಿತ್ತರು. ಉಡುಪಿ ಅಂಚೆ ವಿಭಾಗದ ಏಕೀಕೃತ ವಿತರಣಾ ಕೇಂದ್ರದ ಮೇಲ್ವಿಚಾರಕಿ (ಪ್ರಭಾರ) ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.