ಸಾರಾಂಶ
ಉಡುಪಿಯಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳುವ ವಿಶೇಷ ರೈಲಿಗೆ ಸೋಮವಾರ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ನಿಶಾನೆ ತೋರಿಸಿದರು. ಈ ರೈಲಿನಲ್ಲಿ ಉಡುಪಿ ದಕ ಜಿಲ್ಲೆಗಳ ಒಟ್ಟು 1,410 ಭಕ್ತರು ಕುಂಭಮೇಳಕ್ಕೆ ಪ್ರಯಾಣಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳುವ ವಿಶೇಷ ರೈಲಿಗೆ ಸೋಮವಾರ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ನಿಶಾನೆ ತೋರಿಸಿದರು. ಈ ರೈಲಿನಲ್ಲಿ ಉಡುಪಿ ದಕ ಜಿಲ್ಲೆಗಳ ಒಟ್ಟು 1,410 ಭಕ್ತರು ಕುಂಭಮೇಳಕ್ಕೆ ಪ್ರಯಾಣಿಸಿದರು.ನಿಲ್ದಾಣಕ್ಕೆ ಬಂದ ಈ ವಿಶೇಷ ರೈಲಿನ ಬೋಗಿಗಳಿಗೆ ಗಂಧ, ಕುಂಕುಮ ಹಚ್ಚಿ, ಮಲ್ಲಿಗೆ ಹೂವಿಟ್ಟು, ಪ್ಲ್ಯಾಟ್‍ಫಾರಂನಲ್ಲಿ ತೆಂಗಿನಕಾಯಿ ಒಡೆಯಲಾಯಿತು. ನಂತರ ಶ್ರೀಗಳು ಭಕ್ತರ ಜೈ ಶ್ರೀರಾಮ್ ಘೋಷಣೆಯ ನಡುವೆ ರೈಲಿಗೆ ನಿಶಾನೆ ತೋರಿಸಿದರು.
ಇದಕ್ಕೆ ಮೊದಲು ಪ್ರಯಾಣಿಕರಿಗೆ ಶುಭ ಹಾರೈಸಿದ ಶ್ರೀಗಳು, ಕುಂಭಮೇಳದಲ್ಲಿ ಯಾವುದೇ ಅವಘಡಗಳಿಗೆ ಎಡೆಯಾಗದಂತೆ ಎಚ್ಚರ ವಹಿಸಬೇಕು. ಭಕ್ತರು ಗಡಿಬಿಡಿ, ನೂಕು ನುಗ್ಗಲು, ತಳ್ಳಾಟ ಮಾಡದೇ ಸಾವಧಾನದಿಂದ ವರ್ತಿಸಬೇಕು. ಗಂಗಾಮಾತೆ, ಯಮುನೆ, ಸರಸ್ವತಿಯ ಅನುಗ್ರಹ ಪಡೆಯಬೇಕು. ಜಗತ್ತಿಗೆ ಕ್ಷೇಮವಾಗಲಿ. ವಿಶೇಷ ರೈಲು ಹೊರಡುವಲ್ಲಿ ಸಹಕರಿಸಿದ ರೈಲ್ವೆ ಸಚಿವರು, ಇಲಾಖಾಧಿಕಾರಿಗಳು, ಸಂಸದರಿಗೆ ಅಭಿನಂದನೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂಭಮೇಳ ಫೆ. 25ರ ನಂತರವೂ ವಿಸ್ತರಣೆಯಾದರೆ ಉಡುಪಿಯಿಂದ ಇನ್ನೊಂದು ರೈಲು ಆರಂಭಕ್ಕೆ ಯತ್ನಿಸಲಾಗುವುದು ಎಂದರು.
ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕೊಡ್ಗಿ ಕುಂದಾಪುರ, ಸುರೇಶ್ ಶೆಟ್ಟಿ ಕಾಪು ಮತ್ತು ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಶಶಾಂಕ್ ಶಿವತ್ತಾಯ ಇದ್ದರು. ಸಂಸದರು ಹಾಗೂ ರೈಲ್ವೆ ಅಧಿಕಾರಿಗಳನ್ನು ಗೌರವಿಸಲಾಯಿತು.