ಉಡುಪಿ: ಪತ್ರಕರ್ತರಿಂದ ಡೆಂಘೀ ಬಗ್ಗೆ ಜನಜಾಗೃತಿ, ಲಾರ್ವಾ ಸಮೀಕ್ಷೆ

| Published : Jul 13 2024, 01:42 AM IST

ಉಡುಪಿ: ಪತ್ರಕರ್ತರಿಂದ ಡೆಂಘೀ ಬಗ್ಗೆ ಜನಜಾಗೃತಿ, ಲಾರ್ವಾ ಸಮೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ. ಪ್ರಶಾಂತ್ ಭಟ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಡೆಂಘೀ ರೋಗ ಹರಡುವ ಈಡೀಸ್‌ ಈಜಿಪ್ಟಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನದ ಪ್ರಯುಕ್ತ ಶುಕ್ರವಾರ ಉಡುಪಿ ಪತ್ರಿಕಾ ಭವನದ ಪರಿಸರದಲ್ಲಿ ಪತ್ರಕರ್ತರು ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾಗಳನ್ನು ನಾಶ ಪಡಿಸಿ, ಸಾರ್ವಜನಿಕರಿಗೆ ಕರಪತ್ರಪ ವಿತರಿಸಿ ಡೆಂಘೀ ಕುರಿತು ಅರಿವು ಮೂಡಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ. ಪ್ರಶಾಂತ್ ಭಟ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಚಾಲನೆ ನೀಡಿದರು. ಕಳೆದ ವರ್ಷ ಈ ಪರಿಸರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಾಗೂ ಪ್ರಸ್ತುತ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.

ಪತ್ರಕರ್ತರು ಪತ್ರಿಕಾ ಭವನದ ಸುತ್ತಮುತ್ತಲಿನ ರೆಡ್‌ಕ್ರಾಸ್ ಭವನ, ಕಾಮಗಾರಿ ನಡೆಯುತ್ತಿರುವ ಕಟ್ಟಡ ಹಾಗೂ ಮನೆಗಳಿಗೆ ತೆರಳಿ ಡೆಂಘೀ ಹರಡುವ ಈಡೀಸ್ ಸೊಳ್ಳೆಯ ಲಾರ್ವಾಗಳನ್ನು ಸಮೀಕ್ಷೆ ಮಾಡಿದರು.

ಹೂವಿನ ಕುಂಡ, ಅರೆಯುವ ಕಲ್ಲು, ಪ್ಲಾಸ್ಟಿಕ್ ಮುಚ್ಚಳಗಳಲ್ಲಿರುವ ನೀರಿನಲ್ಲಿ ಲಾರ್ವಾವನ್ನು ಪತ್ತೆ ಹಚ್ಚಿ ಬಳಿಕ ಅವುಗಳನ್ನು ನಾಶ ಪಡಿಸಲಾಯಿತು. ಇದೇ ವೇಳೆ ಮನೆಮಂದಿಗೆ ಕರಪತ್ರಗಳನ್ನು ವಿತರಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಲು ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಡುವಂತೆ ತಿಳಿಹೇಳಲಾಯಿತು.

ಈ ಸಂದರ್ಭ ಆರೋಗ್ಯ ಇಲಾಖೆಯ ಕೀಟಶಾಸ್ತ್ರ ತಜ್ಞೆ ಮುಕ್ತಾ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಮಾಜಿ ಅಧ್ಯಕ್ಷ ಜಯಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.