ಸಾರಾಂಶ
ಗಣೇಶೋತ್ಸವ ನಡೆಯುವ ಒಟ್ಟು 406 ಸಾಮಾನ್ಯ, 73 ಸೂಕ್ಷ್ಮ, 2 ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಗಣೇಶೋತ್ಸವ ಆಚರಣೆ, ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ 3 ಕೆಎಸ್ಆರ್ಪಿ ಮತ್ತು 8 ಡಿಎಆರ್ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ವೈಭವ ವಿಜೃಂಭಣೆ ಹೆಚ್ಚುತ್ತಿದ್ದು, ಗಣೇಶನ ಪೆಂಡಾಲ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು(ಶನಿವಾರ) ಸಂಭ್ರಮದ ಗಣೇಶ ಚತುರ್ಥಿ ಹಬ್ಬದ ಆಚರಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 481 ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಕಳೆದ ವರ್ಷ 474 ಪೆಂಡಾಲ್‌ಗಳಿಗೆ ಅನುಮತಿ ನೀಡಲಾಗಿತ್ತು.ಗಣೇಶೋತ್ಸವ ನಡೆಯುವ ಒಟ್ಟು 406 ಸಾಮಾನ್ಯ, 73 ಸೂಕ್ಷ್ಮ, 2 ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಗಣೇಶೋತ್ಸವ ಆಚರಣೆ, ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ 3 ಕೆಎಸ್ಆರ್ಪಿ ಮತ್ತು 8 ಡಿಎಆರ್ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಯಾವುದೇ ಪೆಂಡಾಲ್‌ಗಳಲ್ಲಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಗಣೇಶೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಬಂಟಿಂಗ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳ ಪೂರ್ವಾನುಮತಿಯನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಜೊತೆಗೆ ಪರಿಸರಕ್ಕೆ ಹಾನಿಯಾಗುವಂತಹ ಬಣ್ಣಗಳಿಂದ ರಚಿಸಲಾದ ಗಣೇಶ ವಿಗ್ರಹಗಳನ್ನು ನಿಷೇಧಿಸಿದ್ದು, ಪರಿಸರಸ್ನೇಹಿ ಗಣಪತಿ ಪ್ರತಿಷ್ಠಾಪಿಸುವಂತೆ ಸೂಚಿಸಲಾಗಿದೆ.