ಉಡುಪಿ: ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಯುವಜನರಲ್ಲಿ ಸೃಜನಶೀಲತೆ ಮತ್ತುನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸೃಜನಶೀಲತೆ ಮತ್ತು ವ್ಯಕ್ತಿ ವಿಕಸನ ಶಿಬಿರವನ್ನು ಆಯೋಜಿಸಲಾಗಿದ್ದು, ಯುವಜನತೆ ತರಬೇತಿಯ ಲಾಭ ಪಡೆದುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದು ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.ಗುರುವಾರ ನಗರದ ಬ್ರಹ್ಮಗಿರಿಯ ಭಾರತೀಯ ರೆಡ್‌ಕ್ರಾಸ್ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಘಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ಕರ್ತವ್ಯ ನಿರ್ವಹಿಸುವಾಗ ನಾಯಕತ್ವ ಗುಣ ಅತಿ ಮುಖ್ಯವಾಗಿರುತ್ತದೆ. ದೇಶದಲ್ಲಿ 18ರಿಂದ 35 ವರ್ಷದೊಳಗಿನ ಯುವಜನರ ಸಂಖ್ಯೆ ಸುಮಾರು ಶೇ. 60-65ರಷ್ಟಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವ ಸಮುದಾಯವು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದರು. ಸೃಜನಶೀಲತೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಂತರ್ಗತವಾಗಿರುತ್ತದೆ. ಆ ಶಕ್ತಿಯನ್ನು ಹೊರಸೂಸಲು ಪರಿಣಾಮಕಾರಿ ತರಬೇತಿ ಅಗತ್ಯವಾಗಿದೆ. ತರಬೇತಿಯಿಂದ ಸೃಜನಶೀಲತೆಯು ಪಕ್ವಗೊಳ್ಳುತ್ತದೆ. ಶಿಕ್ಷಣದ ಜೊತೆಗೆ ವ್ಯಕ್ತಿ ವಿಕಸನ ಶಿಬಿರವು ವ್ಯಕ್ತಿಯ ವ್ಯಕ್ತಿತ್ವ ಅಭಿವೃದ್ಧಿಗೆ ಕಾರಣವಾಗುತ್ತದೆ. ಇಂದಿನ ಯುವ ಜನತೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಮಾಜಕ್ಕೆ ಒಳಿತು ಮಾಡುವ, ಇತರರ ಕಷ್ಟಗಳಿಗೆ ಸ್ಪಂದಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಉತ್ತಮ ಸಂವಹನ ಕೌಶಲ್ಯವನ್ನು ಹೊಂದುವುದರೊಂದಿಗೆ ಸರಿ ತಪ್ಪುಗಳನ್ನು ಧೈರ್ಯವಾಗಿ ಹೇಳುವ, ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಗುಣವನ್ನು ನಾಯಕನಾದವರು ಹೊಂದಿರಬೇಕು ಎಂದರು. ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವಕರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲೂ ಸೃಜನಶೀಲತೆ ಅಡಗಿರುತ್ತದೆ. ಯುವಸಮುದಾಯವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಯುವಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಯುವ ರೆಡ್‌ಕ್ರಾಸ್ ಸ್ವಯಂ ಸೇವಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಎಸಿಟಿಯ ಡೀನ್ ಟ್ರೈನಿಂಗ್ ಡಾ. ವಿವೇಕಾನಂದ ತರಬೇತಿಯ ಸ್ವರೂಪವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ಎಸಿಟಿ ಕೇಂದ್ರ ಹುಬ್ಬಳ್ಳಿಯ ಮುಖ್ಯಸ್ಥೆ ಯಶವಂತಿ, ಜಿಲ್ಲೆಯ ವಿವಿಧ ತಾಲೂಕುಗಳ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಯುವಕರು, ರೆಡ್‌ಕ್ರಾಸ್ ಹಾಗೂ ಡಿಡಿಆರ್‌ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್‌ಕ್ರಾಸ್ ಘಟಕದ ಗೌರವ ಕಾರ್‍ಯದರ್ಶಿ ಡಾ. ಗಣನಾಥ ಎಕ್ಕಾರು ನಿರೂಪಿಸಿದರು.ಯವಜನತೆ ಉತ್ತಮ ನಾಯಕತ್ವ ಕೌಶಲ್ಯ ಬೆಳೆಸಿಕೊಳ್ಳಬೇಕು: ರಾಜೀವ್ ಶೆಟ್ಟಿ
ಬ್ರಹ್ಮಗಿರಿಯ ಭಾರತೀಯ ರೆಡ್‌ಕ್ರಾಸ್ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಘಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.