ಉಡುಪಿ: ಕಾನೂನುಬಾಹಿರ ಕರ್ಕಶ ಹಾರ್ನ್ ತೆರವು

| Published : Jun 18 2024, 12:46 AM IST

ಸಾರಾಂಶ

ಜೂನ್‌ 3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್‌ಗಳಲ್ಲಿ ಅಳವಡಿಸಲಾಗಿರುವ ಕರ್ಕಶ ಹಾರ್ನ್‌ಗಳನ್ನು ಜೂನ್‌ 15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಕರ್ಕಶ ಹಾರ್ನ್‌ಗಳ‍ನ್ನು ತೆರವುಗೊಳಿಸುವಂತೆ ನೀಡಲಾಗಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಉಡುಪಿ ನಗರ ಸಂಚಾರ ಪೊಲೀಸರು ಸೋಮವಾರ ಕಾರ್ಯಾಚರಣೆ ಆದೇಶ ಪಾಲಿಸದ ಉಡುಪಿ ಸಿಟಿ ಬಸ್‌ಗಳ ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಿ ದಂಡ ವಿಧಿಸಿದರು.

ಜೂನ್‌ 3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್‌ಗಳಲ್ಲಿ ಅಳವಡಿಸಲಾಗಿರುವ ಕರ್ಕಶ ಹಾರ್ನ್‌ಗಳನ್ನು ಜೂನ್‌ 15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು.

ಆದರೂ ಅನೇಕ ಬಸ್‌ಗಳಲ್ಲಿ ಕರ್ಕಶ ಹಾರ್ನ್ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಏಳು ಬಸ್‌ಗಳ ಕರ್ಕಶ ಹಾರ್ನ್‌ಗಳನ್ನು ಕಿತ್ತು ತೆಗೆದರು ಮತ್ತು ತಲಾ 500 ರು.ನಂತೆ ಒಟ್ಟು 3500 ರು. ದಂಡ ವಿಧಿಸಿದರು. ಮತ್ತೇ ಕರ್ಕಶ ಹಾರ್ನ್ ಅಳವಡಿಸಿದರೆ ಕಾನೂನಿನಂತೆ 1000 ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಈಗಾಗಲೇ ಬಹುತೇಕ ಸಿಟಿ ಬಸ್‌ಗಳ ಚಾಲಕರು ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಿದ್ದಾರೆ. ಮುಂದೆ ಸರ್ವಿಸ್ ಬಸ್‌ಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು ಎಂದು ಎಸ್ಸೈ ಸುದರ್ಶನ್ ತಿಳಿಸಿದ್ದಾರೆ.