ಉಡುಪಿ: ತಗ್ಗುಪ್ರದೇಶಗಳಿಗೆ ನದಿ ನೀರು, ಪ್ರವಾಹದ ಭೀತಿ

| Published : Jun 28 2024, 12:49 AM IST

ಸಾರಾಂಶ

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜೊತೆಗೆ ವಿಪರೀತ ಗಾಳಿಯೂ ಬೀಸುತ್ತಿದೆ. ಇದರಿಂದ ಕೆಲವು ಕಡೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾದ್ಯಂತ ಭಾರಿ ಮಳೆಯಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಸೀತಾ ಮತ್ತು ಸ್ವರ್ಣ ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ತಗ್ಗು ಗದ್ದೆ, ತೋಟಗಳು ಜಲಾವೃತಗೊಂಡಿವೆ. ಬುಧವಾರ ರಾತ್ರಿ ಮತ್ತು ಗುರುವಾರದ ಮಳೆಗೆ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜೊತೆಗೆ ವಿಪರೀತ ಗಾಳಿಯೂ ಬೀಸುತ್ತಿದೆ. ಇದರಿಂದ ಕೆಲವು ಕಡೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ.

ಬುಧವಾರ ರಾತ್ರಿಯ ಜಡಿಮಳೆಗೆ ಜಿಲ್ಲೆಯಲ್ಲಿ 12 ಮನೆಗಳಿಗೆ, 3 ಜಾನುವಾರು ಕೊಟ್ಟಿಗೆ ಮತ್ತು 3 ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಭಾರತಿ ಎಂಬವರ ಮನೆಗೆ ಗಾಳಿ ಮಳೆಯಿಂದ 10,000 ರು., ಕಾವ್ರಾಡಿ ಗ್ರಾಮದ ಶಾರದ ಅವರ ಮನೆಗೆ 60,000 ರು., ಗಾಳಿಗೆ ಮರಗಳು ಬಿದ್ದು ಗುಜ್ಜಾಡಿ ಗ್ರಾಮದ ವಾಸುದೇವ ಶೇರೆಗಾರ ಅವರ ಜಾನುವಾರು ಕೊಟ್ಟಿಗೆ 15,000 ರು., ಹೆಂಗವಳ್ಳಿ ಗ್ರಾಮದ ಅಬೂಬಕ್ಕರ್ ಅವರ ಅಡಕೆ ಮರಗಳು ಉರುಳಿ 15,000 ರು., ಮೂಸ ಹರ್ಷದ್ ಅವರಿಗೆ 15,000 ರು.ಗಳಷ್ಟು ಹಾನಿಯಾಗಿದೆ.

ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಪವಿತ್ರ ರಾಘವೇಂದ್ರ ಅವರ ಮನೆಗೆ 40,000 ರು., ಮೀನಾಕ್ಷಿ ಗೋಪಾಲ ಅವರ ಮನೆಗೆ 10,000, ಗಣಪ ಹರಿಜನ ಅವರ ಮನೆಗೆ 10,000 ರು., ಪುತ್ತೂರು ಗ್ರಾಮದ ಲೋಕು ಪೂಜಾರಿ ಮನೆ ಮೇಲೆ ಮರ ಬಿದ್ದು 25,000 ರು.ಗಳಷ್ಟು ನಷ್ಟಸಂಭವಿಸಿದೆ.

ಕಾಪು ತಾಲೂಕಿನ ಮೂಳೂರು ಗ್ರಾಮದ ಉದಯ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು 40,000 ರು., ಇನ್ನಂಜೆ ಗ್ರಾಮದ ಅರುಣ್ ಕುಮಾರ್ ಮನೆಯ ಮೇಲೆ ಮರ ಬಿದ್ದು 45,000 ರು., ಕಳತ್ತೂರು ಗ್ರಾಮದ ಶಾಲಿನಿ ಮುಖಾರ್ತಿಅವರ ಮನೆಗೆ 40,000 ರು.ಗಳಷ್ಟು ನಷ್ಟವಾಗಿದೆ.

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸುಮತಿ ನಾಯ್ಕ ಎಂಬವರ ಮನೆಗೆ ಮರ ಬಿದ್ದು 30,000 ರು. ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಪದ್ದು ಶೀನ ಅವರ ಮನೆಗೆ 25,000 ರು., ಪಾಂಡೇಶ್ವರ ಗ್ರಾಮದ ರೋಜಾ ಡಿ ಅಲ್ಮೇಡಾ ಅವರ ಮನೆಗೆ 30,000 ರು., ಹಂದಾಡಿ ಗ್ರಾಮದ ರಘುನಾಥ ನಾಯಕ್ ಬಿ. ಅವರ ಕೊಟ್ಟಿಗೆ 15,000 ಹಾನಿಯಾಗಿದೆ.

ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾರಾಯಣ ಹೆಬ್ಬಾರ್ ಅವರ ಕೊಟ್ಟಿಗೆ 50,000 ರು. ಹಾನಿಯಾಗಿದೆ.

ಬುಧವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 119.50 ಮಿ.ಮೀ. ಮಳೆ ದಾಖಲಾಗಿದೆ. ಇದು ಈ ಬಾರಿಯ ಮಲೆಗಾಲದ ಅತೀ ಹೆಚ್ಚು ಮಳೆಯಾಗಿದೆ.

ತಾಲೂಕುವಾರು ಕಾರ್ಕಳ 154.30, ಕುಂದಾಪುರ 83.40, ಉಡುಪಿ 142.90, ಬೈಂದೂರು 81.40, ಬ್ರಹ್ಮಾವರ 159.20, ಕಾಪು 173.80, ಹೆಬ್ರಿ105.20 ಮಿ.ಮೀ. ಮಳೆ ಆಗಿರುತ್ತದೆ.ಮಳೆಯ ಜೊತೆ 40-45 ಕಿ.ಮಿ. ವೇಗದ ಗಾಳಿ ಸಾಧ್ಯತೆ

ಕರಾವಳಿಯಲ್ಲಿ ಇನ್ನೆರಡು ದಿನ (ಶುಕ್ರವಾರ - ಶನಿವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉಡುಪಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.

ಮುಖ್ಯವಾಗಿ ಜೂನ್‌ 28ರಂದು ಭಾರಿ ಮಳೆಯ ಜೊತೆಗೆ 40-45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ತಗ್ಗುಪ್ರದೇಶದ ಮತ್ತು ನದಿಸಮುದ್ರ ತೀರದ ಜನರು ಎಚ್ಚರಿಕೆಯಿಂದಿರುವಂತೆ ಇಲಾಖೆ ಸೂಚನೆ ನೀಡಿದೆ.