ಸಾರಾಂಶ
ಉಡುಪಿ: ನಗರದ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ ೨೦೦೨-೨೦೦೭ರ ಸಾಲಿನಲ್ಲಿ ಚಿತ್ರಕಲಾ ಪದವಿಯನ್ನು ಪೂರೈಸಿದ 13 ಕಲಾವಿದರ ತಂಡವು 18 ವರ್ಷಗಳ ನಂತರ ಮತ್ತೊಮ್ಮೆ ಸೇರಿ, ತಾವು ಕಲಿತ ಕಲಾಶಾಲೆಯಲ್ಲಿಯೇ ‘ಸಂಗಮ - ಸಮೂಹ ಕಲಾ ಪ್ರದರ್ಶನ ಹಾಗೂ ಗುರುವಂದನೆ’ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಈ ಬಗ್ಗೆ ಈ ಹಳೆವಿದ್ಯಾರ್ಥಿಗಳು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಈ ಕಲಾಶಾಲೆಯಲ್ಲಿನ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಆ.೨೩ರಂದು ಬೆಳಗ್ಗೆ ೧೦:೩೦ಕ್ಕೆ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕ ದಿವಾಕರ್ ಸನಿಲ್ ಹಾಗೂ ಕಲಾಶಾಲೆಯ ನಿರ್ದೇಶಕ ಡಾ. ನಿರಂಜನ್ ಯು.ಸಿ. ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ತಮಗೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಕಲಾವಿದರಾದ ಅನ್ನಪೂರ್ಣ ಕಾಮತ್, ಡಾ. ಜನಾರ್ದನ ರಾವ್ ಹಾವಂಜೆ, ಕಾಂತಿ ನವೀನ್ ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ್ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧ ಎಸ್. ಸನಿಲ್ ಅವರು ರಚಿಸಿರುವ ಗಣೇಶ ಹಾಗೂ ಸಮಕಾಲೀನ ಶೈಲಿಯ ಸುಮಾರು 25 ರಷ್ಟು ಕಲಾಕೃತಿಗಳು ಕಲಾಪ್ರದರ್ಶನದಲ್ಲಿರಲಿದೆ. ಆ. 23ರಿಂದ 31ರವರೆಗೆ ಅಪರಾಹ್ನ 2 ರಿಂದ 6ರವರೆಗೆ ಕಲಾಸಕ್ತರಿಗೆ ಈ ಪ್ರದರ್ಶನ ತೆರೆದಿರಲಿದೆ.ಪ್ರದರ್ಶನದ ನಡುವೆ, 23ರಂದು ಕಾವಿಕಲೆಯ ಪುನರುಜ್ಜೀವನದ ಬಗೆಗಿನ ಡಾಕ್ಯುಮೆಂಟರಿ ಪ್ರದರ್ಶನ ಹಾಗೂ ಸಂವಾದವನ್ನು ಡಾ. ಜನಾರ್ದನ ರಾವ್ ಹಾವಂಜೆ, 24ರಂದು ‘ಕಾಣದ ಕಡಲು’ ಕಿರುಚಿತ್ರ ಪ್ರದರ್ಶನ ಹಾಗೂ ಕಲಾವಿದೆ ಕಾಂತಿ ನಾಯಕ್ ಜೊತೆ ಸಂವಾದ, 29ರಂದು ಹವ್ಯಾಸಿ ಚಾರಣಿಗ ಸುಜೇಂದ್ರ ಕಾರ್ಲ ಅವರೊಂದಿಗೆ ‘ಕಲೆ ಹಾಗೂ ಪ್ರಕೃತಿ’ ಸಂವಾದ, 31ರಂದು ಮಕ್ಕಳಿಗೆ ಉಪಯುಕ್ತವೆನಿಸುವ ಕರಕುಶಲ ಕಲೆಯ ನಿರ್ಮಾಣ ಪ್ರಕ್ರಿಯೆಯ ಪ್ರದರ್ಶನವನ್ನು ಯಶೋಧಾ ಎಸ್. ಸನಿಲ್ ಅವರು ಪ್ರತಿದಿನ ಸಂಜೆ 4ರಿಂದ ನಡೆಸಿಕೊಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಡಾ. ಜನಾರ್ದನ ಹಾವಂಜೆ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಕಾಂತಿ ನವೀನ್ ಪ್ರಭು, ಪುರಂದರ ಆಚಾರ್ಯ ಉಪಸ್ಥಿತರಿದ್ದರು.