ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಪೂಜಾರಿ 10ನೇ ತರಗತಿಯ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾನೆ.ಪ್ರೀತಮ್ ಇಲ್ಲಿನ ಬಿದ್ಕಲ್ಕಟ್ಟೆ ನಿವಾಸಿ ಬಸ್ ಕಂಡಕ್ಟರ್ ಗಣಪತಿ ಪೂಜಾರಿ - ಗೃಹಿಣಿ ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿಯೇ ವ್ಯಾಸಂಗ ಮಾಡಿದ್ದ. ಆಟ ಮತ್ತು ಕ್ವಿಜ್‌ನಲ್ಲಿಯೂ ಮುಂದಿದ್ದ. ಗುರುವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಶಾಲೆಗೆ ಬಂದ ಪ್ರೀತಮ್‌ನನ್ನು ಶಾಲಾಡಳಿತ ಮಂಡಳಿಯವರು ಮತ್ತು ಶಿಕ್ಷಕ - ಶಿಕ್ಷಕಿಯರು ವಾದ್ಯಘೋಷದಿಂದ ಬರ ಮಾಡಿಕೊಂಡು ಅಭಿನಂದಿಸಿದರು ಮತ್ತು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿ ಸಂಭ್ರಮ ವ್ಯಕ್ತಪಡಿಸಿದರು.625 ಅಂಕ ನಂಬಲಾಗಲಿಲ್ಲ !: ಶಾಲೆಗೆ ಟಾಪರ್ ಆಗುತ್ತೇನೆ ಎಂಬ ಭರವಸೆ ಇತ್ತು, ಆದರೆ 625 ಅಂಕ ನಿರೀಕ್ಷಿಸಿರಲಿಲ್ಲ, ನನ್ನ ಹ್ಯಾಂಡ್ ರೈಟಿಂಗ್ ಅಷ್ಟು ಚೆನ್ನಾಗಿರಲಿಲ್ಲ, ಆದ್ದರಿಂದ 620 ಅಂಕ ಬರಬಹುದು ಎಂದು ಭಾವಿಸಿದ್ದೆ ಎಂದು ಪ್ರೀತಮ್ ಪ್ರತಿಕ್ರಿಯಿಸಿದ್ದಾನೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನವನ್ನು ಓದಿ ಇಂಜಿನಿಯರ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾನೆ.ಉತ್ತಮ ಫಲಿತಾಂಶ ಬರುವ ಬಗ್ಗೆ ಪೂರ್ಣ ಭರವಸೆಯಿಂದಿದ್ದ ಪ್ರೀತಮ್ ಯಾವುದೇ ಟೆನ್ಶನ್ ಇಲ್ಲದೆ ಗುರುವಾರ ಬೆಳಗ್ಗೆ ಸಂಬಂಧಿಕರ ಮದುವೆಗೆ ಹೋಗಿದ್ದ, ತಂದೆ ಕರೆ ಮಾಡಿ 625 ಅಂಕ ಬಂದಿದೆ ಎಂದು ಹೇಳಿದರು, ಮೊದಲು ನನಗೆ ನಂಬಲಿಕ್ಕೆ ಆಗಲಿಲ್ಲ, ಬಹಳ ಖುಷಿಯಾಗಿದೆ. ಶಾಲೆಯಲ್ಲಿ ಶಿಕ್ಷಕರ ಬೆಂಬಲದಿಂದ ಸಾಧ್ಯವಾಗಿದೆ. ಅವರು ಉತ್ತಮ ಪಾಠ ಮಾಡುತಿದ್ದರು, ಜೊತೆಗೆ ನನ್ನ ಹ್ಯಾಂಡ್ ರೈಟಿಂಗ್‌ನ್ನು ತಿದ್ದಿದ್ದರು, ಆದ್ದರಿಂದ ನನಗೆ ಬಹಳ ಸಹಾಯವಾಗಿದೆ ಎಂದು ಪ್ರೀತಮ್ ಹೇಳಿದ್ದಾನೆ.ಶಾಲೆಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದೆ ಮತ್ತು ಪ್ರತಿದಿನ ಪಾಠವನ್ನು ಓದುತಿದ್ದೆ. ಪ್ರತಿತಿಂಗಳು ಇಷ್ಟು ಪಾಠಗಳನ್ನು ಓದುವ ಗುರಿ ನಾನೇ ಇಟ್ಟುಕೊಂಡಿದ್ದೆ, ಮನೆಯಲ್ಲಿ ಯಾವುದೇ ಒತ್ತಡ ಇರಲಿಲ್ಲ, ನನಗೆ ಕ್ವಿಜ್‌ನಲ್ಲಿಯೂ ಆಸಕ್ತಿ ಇದೆ, ಅದರಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಸಿಕ್ಕಿದೆ, ಅಮ್ಮ ನಾನು ಐಎಎಸ್ ಆಗಬೇಕು ಎನ್ನುತಿದ್ದಾರೆ, ಆದರೆ ನಾನು ಇಂಜಿನಿಯರ್ ಆಗಬೇಕು ಎನ್ನುವ ಆಸೆಯಲ್ಲಿದ್ದೇನೆ ಎಂದಿದ್ದಾನೆ ಪ್ರೀತಮ್.
ಬಸ್ ಕಂಡಕ್ಟರ್ ಪುತ್ರ ಪ್ರೀತಂ ರಾಜ್ಯಕ್ಕೇ ಟಾಪರ್
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಪೂಜಾರಿ 10ನೇ ತರಗತಿಯ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾನೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.