ಸಾರಾಂಶ
ನಾಳೆ ಸಂಜೆ 4.30ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಅವರಿಂದ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠಗಳ ವತಿಯಿಂದ ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವವಾಗಿ ಮತ್ತು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗುವುದು. ಆ.1ರಿಂದ ಸೆ. 17ರವರೆಗೆ ಒಂದು ಮಂಡಲ (48 ದಿನ) ಕಾಲ ಈ ಕಾರ್ಯಕ್ರಮವನ್ನು ‘ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ’ ಎಂಬುದಾಗಿ ಆಚರಿಸಲಾಗುತ್ತದೆ ಎಂದು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.ಬುಧವಾರ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಈ ಮಂಡಲೋತ್ಸವವನ್ನು ಶುಕ್ರವಾರ ಸಂಜೆ 4.30ಕ್ಕೆ ರಾಜಾಂಗಣದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಉದ್ಘಾಟಿಸಲಿದ್ದಾರೆ. ಪರ್ಯಾಯ ಶ್ರೀಗಳ ಜೊತೆಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯಶಪಾಲ್ ಸುವರ್ಣ, ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಭಾಗವಹಿಸಲಿದ್ದಾರೆ ಎಂದರು.
ಅಷ್ಟಮಿ ಗೊಂದಲ ಬೇಡ: ಉಡುಪಿಯ ಕೃಷ್ಣ ಭಕ್ತರಲ್ಲಿ ಸೌರಮಾನ ಮತ್ತು ಚಾಂದ್ರಮಾನ ಪದ್ಧತಿಯಲ್ಲಿ ಎರಡು ಕೃಷ್ಣ ಜನ್ಮಾಷ್ಟಮಿಯ ಗೊಂದಲ ಇದೆ. ಅದಕ್ಕಾಗಿ ಕೃಷ್ಣಮಠದಲ್ಲಿ ಈ ಬಾರಿ ಎರಡು ಪದ್ಧತಿಯಂತೆಯೂ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಆ. 14ರಂದು ಚಾಂದ್ರಮಾನ ಪದ್ಧತಿಯಂತೆ ಕೃಷ್ಣ ಜನ್ಮಾಷ್ಟಮಿ ನಡೆಯುತ್ತದೆ, ಈ ಪದ್ಧತಿ ಅನುಸರಿಸುವರಿಗೆ ಕೃಷ್ಣಮಠದಲ್ಲಿ ಅವಕಾಶ ಇದೆ. ಸೆ. 14ರಂದು ಸೌರಮಾನ ಪದ್ಧತಿಯಂತೆ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಆದ್ದರಿಂದ ಯಾರಿಗೂ ಗೊಂದಲ ಬೇಡ. ಅವರವರ ಪದ್ಧತಿಯಂತೆ ಕೃಷ್ಣ ಜನ್ಮಾಷ್ಟಮಿ ಆಚರಿಸಬಹುದು ಎಂದು ಶ್ರೀಗಳು ಹೇಳಿದರು.ಕೋಟಿ ಕೃಷ್ಣಮಂತ್ರ ಜಪ:
ಈ ಮಂಡಲೋತ್ಸವದ ಪ್ರಯುಕ್ತ ಭಕ್ತಜನರಿಂದ ಆತ್ಮೋದ್ಧಾರ ಮತ್ತು ಲೋಕಕಲ್ಯಾಣಾರ್ಥ ಕೋಟಿ ಸಂಖ್ಯೆಯಲ್ಲಿ ಕೃಷ್ಣಮಂತ್ರ ಜಪ ಮಾಡುವ ಸಂಕಲ್ಪ ಮಾಡಿದ್ದೇವೆ. ಪುತ್ತಿಗೆ ಮಠದ ಶ್ರೀ ಸುಧೀಂದ್ರ ತೀರ್ಥರು ಒಲಿಸಿಕೊಂಡಿದ್ದ ‘ಸ್ವಾಮಿ ಶ್ರೀಕೃಷ್ಣಾಯ ನಮಃ’ ಎಂಬ ಮಂತ್ರವನ್ನು ಯಾವುದೇ ಜಾತಿ, ಲಿಂಗ ಬೇಧವಿಲ್ಲದೇ, ಸೆ18ರಿಂದ 20ರವರೆಗೆ 3 ದಿನಗಳ ಕಾಲ ಜಪಿಸಿ ಕೃಷ್ಣನ ಸನ್ನಿಧಿಯಲ್ಲಿ ಸಮರ್ಪಿಸಬೇಕು ಎಂದು ಶ್ರೀಗಳು ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ದಿವಾಣರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))