ಉಡುಪಿ: ಮರಾಠಿ ಭಾಷೆಯ ‘ಚಕ್ರವ್ಯೂಹ’ ಯಕ್ಷಗಾನ ಯಶಸ್ವಿ ಪ್ರದರ್ಶನ

| Published : May 25 2024, 12:47 AM IST

ಸಾರಾಂಶ

ಉಡುಪಿಯಲ್ಲಿ ಪ್ರದರ್ಶನ ಕಂಡ ಮರಾಠಿ ಯಕ್ಷಗಾನದಲ್ಲಿ ವಿವಿಧ ಔದ್ಯೋಗಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಸುಮಾರು 20 ಜನ ಹವ್ಯಾಸಿ ಕಲಾವಿದರು ಗುಣಮಟ್ಟದ ಪ್ರದರ್ಶನದ ಮೂಲಕ ಗಮನ ಸೆಳೆದರು. ಈ ಮೊದಲು ಮಹಾರಾಷ್ಟ್ರದಲ್ಲಿ ಈ ಪ್ರಸಂಗ ಮೂರು ಪ್ರದರ್ಶನಗಳನ್ನು ಕಂಡು, ಜನಮೆಚ್ಚಿಗೆ ಗಳಿಸಿತ್ತು. ಡಾ. ಶಿವರಾಮ ಕಾರಂತರ ಒಡನಾಡಿಯಾಗಿದ್ದ, ಮರಾಠಿ ಲೇಖಕ ವಿಜಯಕುಮಾರ್ ಪಾತೆರ್ಪೆರ್ ಅವರು ಪ್ರಸಂಗ ರಚನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಖ್ಯಾತ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ‘ಚಕ್ರವ್ಯೂಹ’ ಉಡುಪಿಯಲ್ಲಿ ಪ್ರದರ್ಶನಗೊಂಡಿತು. ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಐವೈಸಿಯಲ್ಲಿ ನಡೆದ ಈ ವಿಶಿಷ್ಟ ಯಕ್ಷಗಾನ, ಭಾಗವತಿಕೆ ಸಹಿತ ಸಂಪೂರ್ಣ ಯಕ್ಷಗಾನ ಪ್ರಸಂಗ ಮರಾಠಿ ಭಾಷೆಯಲ್ಲಿ ಪ್ರದರ್ಶನಗೊಂಡಿತು.

ವಿವಿಧ ಔದ್ಯೋಗಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಸುಮಾರು 20 ಜನ ಹವ್ಯಾಸಿ ಕಲಾವಿದರು ಗುಣಮಟ್ಟದ ಪ್ರದರ್ಶನದ ಮೂಲಕ ಗಮನ ಸೆಳೆದರು. ಈ ಮೊದಲು ಮಹಾರಾಷ್ಟ್ರದಲ್ಲಿ ಈ ಪ್ರಸಂಗ ಮೂರು ಪ್ರದರ್ಶನಗಳನ್ನು ಕಂಡು, ಜನಮೆಚ್ಚಿಗೆ ಗಳಿಸಿತ್ತು. ಡಾ. ಶಿವರಾಮ ಕಾರಂತರ ಒಡನಾಡಿಯಾಗಿದ್ದ, ಮರಾಠಿ ಲೇಖಕ ವಿಜಯಕುಮಾರ್ ಪಾತೆರ್ಪೆರ್ ಅವರು ಪ್ರಸಂಗ ರಚನೆ ಮಾಡಿದ್ದಾರೆ. ಮುಂದೆ ಎರಡನೇ ಹಂತದಲ್ಲಿ ಮಹಾರಾಷ್ಟ್ರದಲ್ಲೇ ಎಂಟು ಪ್ರದರ್ಶನಗಳು ನಡೆಯಲಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

............

ಇಂದು ತಿರುಗಾಟ ಸಂಪನ್ನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲಾ ಆರು ಮೇಳಗಳ ಪ್ರಸ್ತುತ ಸಾಲಿನ ತಿರುಗಾಟದ ಕೊನೆಯ ಪ್ರದರ್ಶನ ಪತ್ತನಾಜೆಯ ಮರುದಿನ ಶನಿವಾರ ರಾತ್ರಿ 7ರಿಂದ ನಡೆಯಲಿದೆ. ಭಾನುವಾರ ಮುಂಜಾನೆ 5.30ರ ತನಕ ಕಟೀಲು ಕ್ಷೇತ್ರದ ರಥ ಬೀದಿಯಲ್ಲಿ ಒಂದೇ ವೇದಿಕೆಯಲ್ಲಿನ ಆರು ರಂಗಸ್ತಳಗಳಲ್ಲಿ ಪಂಚಕಲ್ಯಾಣ (ವಿಶಾಲಾಕ್ಷಿ- ವನಜಾಕ್ಷಿ- ಮೀನಾಕ್ಷಿ- ಚಿತ್ರಾಕ್ಷಿ-ಕಂಜಾಕ್ಷಿ) ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

2023-24ನೇ ಸಾಲಿನಲ್ಲಿ ಕಟೀಲು ಆರೂ ಮೇಳಗಳು 168 ದಿನಗಳ ಕಾಲ ತಿರುಗಾಟ ನಡೆಸಿ ಒಟ್ಟು 1,008 ಬಯಲಾಟಗಳನ್ನು ಪ್ರದರ್ಶಿಸಿದೆ. ಆರೂ ಮೇಳಗಳು ಈ ಬಾರಿಯ ತಿರುಗಾಟದಲ್ಲಿ ಒಟ್ಟು 554 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಿವೆ.ಈ ಪೈಕಿ ಒಂದನೇ ಮೇಳ 80, ಎರಡನೇ ಮೇಳ 95, ಮೂರನೇ ಮೇಳ 105, ನಾಲ್ಕನೇ ಮೇಳ 89, ಐದನೇ ಮೇಳ 94, ಆರನೇ ಮೇಳ 91 ದೇವಿ ಮಹಾತ್ಮೆ ಪ್ರದರ್ಶನ ನೀಡಿವೆ.

ಆರೂ ಮೇಳಗಳು ಈ ವರ್ಷ ಒಟ್ಟು 51 ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನ ನೀಡಿವೆ. ಈ ಪೈಕಿ 1ನೇ ಮೇಳ 12, 2ನೇ ಮೇಳ 7, 3ನೇ ಮೇಳ 11, 4ನೇ ಮೇಳ 6, 5ನೇ ಮೇಳ 5, 6ನೇ ಮೇಳ 10 ಕಡೆ ಕ್ಷೇತ್ರ ಮಹಾತ್ಮೆ ಪ್ರದರ್ಶಿಸಿವೆ.ಉಳಿದಂತೆ ರಾಮಾಯಣಕ್ಕೆ ಸಂಬಂಧಿಸಿದ ರಾಮ ರಾಮ ಶ್ರೀರಾಮ, ಸೀತಾ ಕಲ್ಯಾಣ, ಪಂಚವಟಿ, ರಾಮಾಶ್ವಮೇಧ, ರಾಮಾಂಜನೇಯ ಪ್ರಸಂಗಗಳು 300ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ.

20 ವರ್ಷಕ್ಕೆ ಬುಕ್ಕಿಂಗ್:ಕಟೀಲಿನ ಒಟ್ಟು ಆರು ಮೇಳಗಳಿಂದ ವರ್ಷದಲ್ಲಿ ಗರಿಷ್ಠ 1,100 ಆಟಗಳನ್ನು ಪ್ರದರ್ಶಿಸಲಾಗುತ್ತಿದ್ದು, ಅದರಲ್ಲಿ 450 ಆಟಗಳು ಶಾಶ್ವತ (ಕಾಯಂ), 240 ಆಟಗಳು ತತ್ಕಾಲ್. ಉಳಿದಂತೆ ಇತರರಿಗೆ ಎಂಬ ಲೆಕ್ಕಾಚಾರದಿಂದಾಗಿ ಸುಮಾರು 20 ವರ್ಷ ಗಳವರೆಗೂ ಯಕ್ಷಗಾನ ಸೇವೆಯಾಟಗಳು ಬುಕ್ಕಿಂಗ್ ಆಗಿವೆ.