ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಉಡುಪಿಯ ಇಬ್ಬರು ಸಾಧಕ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿ ಅವರು ಸನ್ಮಾನಕ್ಕೆ ಆಹ್ವಾನಿತರಾಗಿದ್ದಾರೆ.ರಾಮಮಂದಿರದ ಉದ್ಘಾಟನೆಯ ನಂತರ 48 ದಿನಗಳ ಅಖಂಡ ಮಂಡಲೋತ್ಸವ ನಡೆಸುತ್ತಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಈ ಇಬ್ಬರು ಸಮಾಜಸೇವಕರನ್ನು ಸನ್ಮಾನಿಸಲು ತೀರ್ಮಾನಿಸಿದ್ದಾರೆ.ನೂರಾರು ಮಂದಿಯ ಜೀವವನ್ನು ಉಳಿಸಿದ, ಅಸಹಾಯಕ ಮಹಿಳೆಯರ ರಕ್ಷಣೆ, ಅನಾಥರಿಗೆ ಔಷಧೋಪಚಾರ, ಮಾನಸಿಕ ಅಸ್ವಸ್ಥರಿಗೆ ಆಶ್ರಯ ನೀಡುವ ನಿತ್ಯಾನಂದ ಮತ್ತು ವಿಶು ಅವರ ಸೇವೆಯನ್ನು ಹತ್ತಿರದಿಂದ ಬಲ್ಲ ಪೇಜಾವರ ಶ್ರೀಗಳು ಅವರನ್ನು ಅಯೋಧ್ಯೆಗೆ ಕರೆಸಿ ಬಾಲರಾಮ ಸನ್ನಿಧಿಯಲ್ಲಿ ಗೌರವಿಸುವುದಕ್ಕಾಗಿ ಆಹ್ವಾನಿಸಿದ್ದಾರೆ. ಅವರಿಬ್ಬರು ಇಂದು (ಫೆ.28) ಅಯೋಧ್ಯೆಗೆ ತೆರಳಲಿದ್ದಾರೆ.* ನಿತ್ಯಾನಂದ ಒಳಕಾಡು: ಇವರು ಕಳೆದ 8 ವರ್ಷಗಳಿಂದ ಉಡುಪಿಯಲ್ಲಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ. ಬಡವ ಬಲ್ಲಿದ, ಜಾತಿ ಧರ್ಮದ ಭೇದ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಅವರು ಇದುವರೆಗೆ ಸುಮಾರು 5000ಕ್ಕೂ ಹೆಚ್ಚು ಶವಗಳನ್ನು ಉಚಿತವಾಗಿ ಆಸ್ಪತ್ರೆಯಿಂದ ಮನೆಗೆ ಅಥವಾ ಆಸ್ಪತ್ರೆಯಿಂದ ಸ್ಮಶಾನಕ್ಕೆ ಸಾಗಿಸಿದ್ದಾರೆ. 3000ಕ್ಕೂ ಅಧಿಕ ಅನಾಥರು, ಅಶಕ್ತರು, ಬಿಕ್ಷುಕರು, ಮಾನಸಿಕ ರೋಗಿಗಳು, ಅಂಗವಿಕಲರು, ಕುಡುಕರು, ಅಪಘಾತಕ್ಕೀಡಾದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.* ವಿಶು ಶೆಟ್ಟಿ ಅಂಬಲಪಾಡಿಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತಗಳ ಸಂದರ್ಭದಲ್ಲಿ ವಿಶು ಶೆಟ್ಟಿ ಉಚಿತವಾಗಿ ತನ್ನದೇ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ನೂರಾರು ಮಂದಿ ವಿಶು ಶೆಟ್ಟಿ ಅವರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆದು ಬದುಕಿದ್ದಾರೆ.
ಆಕಸ್ಮಿಕವಾಗಿ ಅಥವಾ ಆತ್ಮಹತ್ಯೆಗಾಗಿ ವಿಷ ಸೇವಿಸಿದ್ದ 10ಕ್ಕೂ ಹೆಚ್ಚು ಮಂದಿಯನ್ನು ವಿಶು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರದಿಂದ, ಕಟ್ಟಡದಿಂದ ಬಿದ್ದ, ಆಳ ಕಮರಿಗೆ ಬಿದ್ದು ಗಾಯಗೊಂಡ ೧೦ಕ್ಕೂ ಹೆಚ್ಚಿ ಕಾರ್ಮಿಕರನ್ನು ಬದುಕಿಸಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಹತ್ತಾರು ಒಂಟಿ ಯುವತಿಯರನ್ನು ಪಾರು ಮಾಡಿ ಆಶ್ರಯ ಕಲ್ಪಿಸಿದ್ದಾರೆ.