ಸಾರಾಂಶ
ಉಚ್ಚಿಲ: ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ, ಇಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ನಿತ್ಯವೂ ವೈವಿಧ್ಯಮಯವಾಗಿ ನವರಾತ್ರೋತ್ಸವ - ಉಡುಪಿ ಉಚ್ಚಿಲ ದಸರಾವು ಭಕ್ತರನ್ನು ಸೆಳೆಯುತ್ತಿದೆ. ಗುರುವಾರ ಅಕರ್ಷಕವಾದ ರಂಗೋಲಿ ಸ್ಪರ್ಧೆ ನಡೆದರೆ, ಶುಕ್ರವಾರ ಮುದ್ದಮಕ್ಕಳಿಗಾಗಿ ಮುದ್ದುಶಾರದೆ ಛದ್ಮವೇಷ ಸ್ಪರ್ಧೆ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.ಸುಮಾರು 70ಕ್ಕೂ ಹೆಚ್ಚು 3ರಿಂದ 9 ವರ್ಷ ವಯೋಮಾನದ ಪುಟ್ಟ ಮಕ್ಕಳನ್ನು ಹೆತ್ತವರು ಶಾರದೆಯ ವೇಷ ಹಾಕಿ ಕರೆ ತಂದಿದ್ದರು, ಈ ಮಕ್ಕಳು ವೇದಿಕೆಯಲ್ಲಿ ತಮ್ಮ ಮುಗ್ಧ ಪ್ರದರ್ಶನವನ್ನು ನೀಡಿ ತೀರ್ಪಗಾರರು ಅಂಕ ನೀಡುವುದಕ್ಕೆ ಪೇಚಾಡುವಂತೆ ಮಾಡಿದ್ದು ಮಾತ್ರವಲ್ಲದೆ, ವಿಶಾಲವಾದ ದೇವಾಲಯದಲೆಲ್ಲಾ ಓಡಾಡುತ್ತಾ ಪರಿಸರವನ್ನೇ ಶಾರದಾಮಯಗೊಳಿಸಿದ್ದರು.ಶುಕ್ರವಾರ ದೇವಿಯ ದಿನವಾದ್ದರಿಂದ ಎಂದಿಗಿಂತಲೂ ಹೆಚ್ಚು ಭಕ್ತರು ಈ ದಿನ ದೇವಾಲಯಕ್ಕೆ ಭೇಟಿ ನೀಡಿದ್ದರು. ಎಲ್ಲಿ ನೋಡಿದರೂ ಸರದಿಯಲ್ಲಿ ನಿಂತ ಭಕ್ತರು ಕಾಣುತಿದ್ದರು. ಅವರನ್ನೆಲ್ಲಾ ಅಷ್ಟೇ ಗೌರವದಿಂದ ಸ್ವಯಂಸೇವಕರು ಉಪಚರಿಸುತಿದ್ದರು. ಶಿಸ್ತು ಮತ್ತು ಸುವ್ಯವಸ್ಥೆಗೆ ಇನ್ನೊಂದು ಹೆಸರಿನಂತೆ ಉಡುಪಿ ಉಚ್ಚಿಲ ದಸರಾ ನಡೆಯುತ್ತಿದೆ.
ಫಲಿತಾಂಶ: ಮುದ್ದು ಶಾರದೆ ಸ್ಪರ್ಧೆ - ಪ್ರಥಮ : ಅನ್ವಿ ಎಸ್. ನಾಯಕ್ ಬ್ರಹ್ಮಾವರ, ದ್ವಿತೀಯ: ವಿಶ ಎಸ್.ಪೂಜಾರಿ ಕಾರ್ಕಳ, ತೃತೀಯ: ಆಧ್ಯ ಕಲ್ಯ.ರಂಗೋಲಿ ಸ್ಪರ್ಧೆ- ಮಹಿಳಾ ವಿಭಾಗ ಪ್ರಥಮ : ಪ್ರಮೀಳಾ ಶೆಟ್ಟಿ ಬೆಳ್ಮಣ್ಣು, ದ್ವಿತೀಯ :ವಿದ್ಯಾ ವಿಶ್ವೇಶ್, ತೃತೀಯ : ಮಂಗಳ ಸಾಲ್ಯಾನ್ ನಿಟ್ಟೂರು.ಪುರುಷರ ವಿಭಾಗ ಪ್ರಥಮ: ತಿಲಕ್ ಪುತ್ರನ್ ಬಡಾಎರ್ಮಾಳು, ದ್ವಿತೀಯ : ಕಿರಣ್ ಕುಮಾರ್ ಕುರ್ಕಾಲು, ತೃತೀಯ : ಅತುಲ್ ಮಂಗಳೂರು.
ವಿಜೇತ ಮಕ್ಕಳಿಗೆ ದಸರಾ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಬಹುಮಾನಗಳನ್ನು ನೀಡಿ ಅಭಿನಂದಿಸಿದರು.