ಉಡುಪಿ ಉಚ್ಚಿಲ ದಸರಾ ಸಂಪನ್ನ; ಶಾರದೆ, ನವದುರ್ಗೆಯರ ಜಲಸ್ತಂಭನ

| Published : Oct 14 2024, 01:23 AM IST

ಉಡುಪಿ ಉಚ್ಚಿಲ ದಸರಾ ಸಂಪನ್ನ; ಶಾರದೆ, ನವದುರ್ಗೆಯರ ಜಲಸ್ತಂಭನ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರ ಜಯಘೋಷದೊಂದಿದೆ ಏಕಕಾಲದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ವಿಗ್ರಹಗಳನ್ನು ಸಮುದ್ರದಲ್ಲಿ ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ಆಕಾಶದಲ್ಲಿ ಸುಡುಮದ್ದು ಪ್ರದರ್ಶನ ಜಲಸ್ತಂಭನ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ನೀಡಿತು.

ಕನ್ನಡಪ್ರಭ ವಾರ್ತೆ ಕಾಪು

ಕರ್ನಾಟಕದ ಕೊಲ್ಹಾಪುರ ಎಂದೇ ಪ್ರಸಿದ್ಧಿಯಾಗುತ್ತಿರುವ ಇಲ್ಲಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ ವೈಭವದಿಂದ ನಡೆದ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ನವದುರ್ಗೆಯರು ಸಹಿತ ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ‌ ಕಾಪುವಿನ ಕಡಲ ಕಿನಾರೆಯಲ್ಲಿ ಶನಿವಾರ ರಾತ್ರಿ ಭವ್ಯವಾಗಿ ನಡೆಯಿತು.

ಉಚ್ಚಿಲ ದೇವಾಲಯದಿಂದ ಕಾಪು ಸಮುದ್ರ ತೀರದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯರ ವಿಗ್ರಹಗಳಿಗೆ ಕಡಲ ಕಿನಾರೆಯಲ್ಲಿ ಕಾಶಿ ಗಂಗಾರತಿ ಮಾದರಿಯಲ್ಲಿ ಗಂಗಾರತಿ ನಡೆಸಲಾಯಿತು. ಜೊತೆಗೆ ಸಾವಿರಾರು ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿಯನ್ನೂ ನೆರವೇರಿಸಲಾಯಿತು.ಬಳಿಕ ಭಕ್ತರ ಜಯಘೋಷದೊಂದಿದೆ ಏಕಕಾಲದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ವಿಗ್ರಹಗಳನ್ನು ಸಮುದ್ರದಲ್ಲಿ ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ಆಕಾಶದಲ್ಲಿ ಸುಡುಮದ್ದು ಪ್ರದರ್ಶನ ಜಲಸ್ತಂಭನ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ನೀಡಿತು. ಈ ಸಂದರ್ಭ ದಸರಾದ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್‌ ಎರ್ಮಾಳು, ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು.

ಜಲಸ್ತಂಭನ ಸಂದರ್ಭ 250ಕ್ಕೂ ಮಂದಿ ಸ್ವಯಂಸೇವಕರು ವಿಶೇಷವಾಗಿ ಸಹಕರಿಸಿದ್ದರು. ದೇವಳದ ಪ್ರಬಂಧಕ ಸತೀಶ್‌ ಅಮೀನ್‌ ಪಡುಕರೆ ನಿರೂಪಿಸಿ, ವಂದಿಸಿದರು.