ಸಾರಾಂಶ
20 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಫುಟ್ಬಾಲ್ ಪಂದ್ಯಾಕೂಟಕ್ಕೆ ಸಿದ್ಧವಾಗುತ್ತಿರುವ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮೂಲದ ವಲ್ಲರೀ ಪೆಜತ್ತಾಯ ರಾವ್ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮುಂದಿನ 20 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಫುಟ್ಬಾಲ್ ಪಂದ್ಯಾಕೂಟಕ್ಕೆ ಸಿದ್ಧವಾಗುತ್ತಿರುವ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮೂಲದ ವಲ್ಲರೀ ಪೆಜತ್ತಾಯ ರಾವ್ ಆಯ್ಕೆಯಾಗಿದ್ದಾರೆ.ಈ ತಂಡ ಪ್ರಸ್ತುತ ಉಜ್ಬೇಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿದೆ. ಸ್ವಿಡನ್ ದೇಶದ ಮಾಜಿ ಫುಟ್‌ಬಾಲ್ ಆಟಗಾರ ಜೋಕಿಂ ಅಲೆಕ್ಸಾಂಡರ್ಸನ್ ಅವರು ಭಾರತೀಯ ತಂಡದ ತರಬೇತುದಾರರಾಗಿದ್ದಾರೆ.2026ರಲ್ಲಿ ಥಾಯ್ಲಾಂಡಿನಲ್ಲಿ ಈ ಏಷ್ಯಾ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಅದಕ್ಕೆ ಅರ್ಹತೆ ಗಳಿಸಬೇಕಾದರೆ ಭಾರತದ ಈ ಬಾಲಕಿಯರ ತಂಡ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ನಡೆಯುವ ಅರ್ಹತಾ ಪಂದ್ಯಗಳಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಬೇಕಾಗಿದೆ. ಅದಕ್ಕಾಗಿ ಉಜ್ಬೇಕಿಸ್ತಾನದ ತಾಷ್ಕೆಂಟನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ಈ 24 ಬಾಲಕಿಯರ ದೈಹಿಕ ಕ್ಷಮತೆಯನ್ನು ವೃದ್ಧಿಗೊಳಿಸುವುದು ವಲ್ಲರಿ ಅವರ ಕೆಲಸವಾಗಿದೆ. ತರಬೇತಿಯ ಸಂದರ್ಭದಲ್ಲಿ ಭಾರತೀಯ ತಂಡವು ಉಜ್ಬೇಕಿಸ್ತಾನದ ಜೊತೆ 2 ಪಂದ್ಯಗಳನ್ನು ಆಡಿದ್ದು, ಮೊದಲ ಪಂದ್ಯದಲ್ಲಿ 1 - 1 ಅಂತರದಲ್ಲಿ ಸಮಬಲ ಸಾಧಿಸಿತು. 2ನೇ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ 4 - 1 ಅಂತರದಲ್ಲಿ ರೋಚಕ ವಿಜಯವನ್ನು ದಾಖಲಿಸಿದೆ. ಈ ಸಾಧನೆಯಲ್ಲಿ ಬಾಲಕಿಯರ ಉತ್ತಮ ದೈಹಿಕ ಕ್ಷಮತೆಯ ಪಾತ್ರವೂ ಇದೆ.ವಲ್ಲರಿ ಉಡುಪಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಾದಿರಾಜ ಪೆಜತ್ತಾಯ-ಸಹನಾ ಪೆಜತ್ತಾಯ ದಂಪತಿ ಪುತ್ರಿ. ಡಾ.ವಿಶಾಕ್ ರಾವ್ ಪತ್ನಿ.