ಉಡುಪಿಯ ಹಳ್ಳಿ ಹುಡುಗಿ ಈಗ ನೌಕಾಪಡೆ ಪೈಲೆಟ್‌!

| Published : Jun 30 2025, 12:34 AM IST

ಉಡುಪಿಯ ಹಳ್ಳಿ ಹುಡುಗಿ ಈಗ ನೌಕಾಪಡೆ ಪೈಲೆಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯ ಪೆರ್ಣಂಕಿಲ ಎಂಬ ಕುಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಸೀಮಾ ತೆಂಡುಲ್ಕರ್ ಪ್ರತಿಭಾವಂತೆ, ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿಧರೆ. ಎಸ್ಸೆಸ್ಸೆಲ್ಸಿ ತನಕ ಕನ್ನಡ ಮಾಧ್ಯಮದಲ್ಲೇ ಕಲಿತ ಈಕೆ ಪಿಯುಸಿ ವ್ಯಾಸಂಗವನ್ನು ಉಡುಪಿಯಲ್ಲೇ ಪೂರೈಸಿದರು. ಎಂಜಿನಿಯರಿಂಗ್‌ ಶಿಕ್ಷಣ ಬೆಂಗಳೂರಿನಲ್ಲಿ ಪಡೆದಿದ್ದಾರೆ. ತನ್ನ ಸಾಹಸಿ ಮನೋಭಾವಕ್ಕೆ ಅನುಗುಣವಾಗಿ ಆಕೆ ಭವಿಷ್ಯವನ್ನು ಹುಡುಕಿಕೊಂಡಿರುವುದು ದೇಶಸೇವೆಯಲ್ಲಿ.

ಜೋಶ್ ಇರುವ ಸಾಹಸ ಮಾಡುವ ಕೆಲಸ ಮಾಡಬೇಕೆಂದೇ ಸೈನ್ಯಕ್ಕೆ ಸೇರಿದೆ: ಸೀಮಾ ತೆಂಡುಲ್ಕರ್

ಸುಭಾಶ್ಚಂದ್ರ ಎಸ್.ವಾಗ್ಳೆ

ಕನ್ನಡಪ್ರಭ ವಾರ್ತೆ ಉಡುಪಿ ಹಿಂದೆ ಹೆಚ್ಚು ವಿದ್ಯಾವಂತರಿರುವ ಕರಾವಳಿಯಿಂದ ಭಾರತೀಯ ಸೈನ್ಯಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇತ್ತು, ಆದರೆ ಇಂದು ಉನ್ನತ ಶಿಕ್ಷಣ ಪಡೆದ ಇಲ್ಲಿನ ಯುವಕ ಯುವತಿಯರು ಸೈನ್ಯಕ್ಕೆ ಸೇರುವ ಆಸಕ್ತಿ ತೋರಿಸುತಿದ್ದಾರೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರತಿಭೆ ಸೀಮಾ ತೆಂಡುಲ್ಕರ್ ಭಾರತೀಯ ನೌಕಾ ಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದು ಸೋಮವಾರದಿಂದ ಕೇರಳ‍ದಲ್ಲಿ ತರಬೇತಿ ಪಡೆಯಲಿದ್ದಾರೆ.

ಉಡುಪಿ ಜಿಲ್ಲೆಯ ಪೆರ್ಣಂಕಿಲ ಎಂಬ ಕುಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಸೀಮಾ ತೆಂಡುಲ್ಕರ್ ಪ್ರತಿಭಾವಂತೆ, ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿಧರೆ. ಎಸ್ಸೆಸ್ಸೆಲ್ಸಿ ತನಕ ಕನ್ನಡ ಮಾಧ್ಯಮದಲ್ಲೇ ಕಲಿತ ಈಕೆ ಪಿಯುಸಿ ವ್ಯಾಸಂಗವನ್ನು ಉಡುಪಿಯಲ್ಲೇ ಪೂರೈಸಿದರು. ಎಂಜಿನಿಯರಿಂಗ್‌ ಶಿಕ್ಷಣ ಬೆಂಗಳೂರಿನಲ್ಲಿ ಪಡೆದಿದ್ದಾರೆ. ತನ್ನ ಸಾಹಸಿ ಮನೋಭಾವಕ್ಕೆ ಅನುಗುಣವಾಗಿ ಆಕೆ ಭವಿಷ್ಯವನ್ನು ಹುಡುಕಿಕೊಂಡಿರುವುದು ದೇಶಸೇವೆಯಲ್ಲಿ.

ಭಾರತೀಯ ನೌಕಾ ಸೇನೆಯಲ್ಲಿ ಅದರದ್ದೇ ಆದ ವಾಯುಪಡೆ ವಿಭಾಗವೂ ಇದೆ, ಅದರದ್ದೇ ಪೈಲಟ್‌ಗಳೂ ಇದ್ದಾರೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ 7 ಮಂದಿ ಮಹಿಳಾ ಪೈಲಟ್‌ ಗಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಸೀಮಾ ಕೂಡ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಸರ್ವೀಸ್ ಸೆಲೆಕ್ಷನ್ ಬೋರ್ಡ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ ಸೀಮಾ ಮೇ ತಿಂಗಳಲ್ಲಿ ಆಯ್ಕೆ ಪತ್ರವನ್ನು ಪಡೆದಿದ್ದಾರೆ. ಇಂದಿನಿಂದ ಕೇರಳದಲ್ಲಿರುವ ಇಂಡಿಯನ್ ನೇವಿ ಅಕಾಡೆಮಿಯಲ್ಲಿ ತರಬೇತಿಗೆ ಸೇರಿದ್ದಾರೆ. ತರಬೇತಿಯ ನಂತರ ಸಬ್‌ಲೆಪ್ಟಿನೆಂಟ್ ಹುದ್ದೆಯಲ್ಲಿ ಸೇನೆಯನ್ನು ಸೇರಿ, ಪೈಲೆಟ್ ಆಗಿ ಕೆಲಸ ಮಾಡಲಿದ್ದಾರೆ.ಸೀಮಾ ಅವರ ತಂದೆ ಸದಾನಂದ ತೆಂಡುಲ್ಕರ್ ಕೃಷಿಕರು, ತಾಯಿ ಜಯಶ್ರೀ ಗೃಹಿಣಿ, ಅಕ್ಕ ಸೌಮ್ಯ ತೆಂಡುಲ್ಕರ್ ನ್ಯಾಚುರೋಪತಿ ವೈದ್ಯೆ, ಈಕೆ ಕೂಡ ಅಮೆರಿಕಾದ ಪ್ರವಾಸಿ ಹಡಗಿನಲ್ಲಿ ಉದ್ಯೋಗಿಯಾಗಿದ್ದಾರೆ. ತಂದೆತಾಯಿ ತಮ್ಮಿಬ್ಬರು ಹೆಣ್ಣುಮಕ್ಕಳ ಸಾಧನೆ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸುತ್ತಾರೆ. ...................

ಜೋಶ್‌ ಇರುವ ಕೆಲಸ ಮಾಡಬೇಕೆಂದು...

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದಾಗ ಎನ್‌ಸಿಸಿ ಆರ್ಮಿ ಕೆಡೆಟ್ ಆಗಿದ್ದೆ, ಮುಂದೆ ಕೇವಲ ಇಂಜಿನಿಯರ್ ಆಗಿ ಉದ್ಯೋಗ ಪಡೆಯುವುದಕ್ಕಿಂತ ವಿಭಿನ್ನ ರಂಗದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದೆ, ದೇಶಸೇವೆಯ ಅವಕಾಶ, ಜೋಶ್ ಇರುವ, ದೈಹಿಕ ಸಾಹಸ ಇರುವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಎಂದುಕೊಂಡಿದ್ದೆ, ಅದಕ್ಕೆ ನೇವಿ ಸೇರಿದೆ ಎನ್ನುತ್ತಾರೆ ಭಾರತೀಯ ನೌಕಪಡೆಯ ಭಾವಿ ಪೈಲಟ್ ಸೀಮಾ ತೆಂಡುಲ್ಕರ್.