ಉಡುಪಿ: ಉಡುಪಿ ನಗರ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಪ್ರಗತಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಗಳಾಗಿವೆ, ಆದ್ದರಿಂದ ಈ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಿ ಕುಡಿಯುವ ನೀರನ್ನು ಒದಗಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಅಧ್ಯಕ್ಷ ಟಿ. ರಘು ಮೂರ್ತಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವತಿಯಿಂದ ನಡೆಸಲಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡುತ್ತಿದ್ದರು. ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಪ್ರತಿದಿನ 45 ಎಂ.ಎಲ್.ಡಿ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಪ್ರಸ್ತುತ ಉಡುಪಿ ನಗರಕ್ಕೆ ಬಜೆ ಅಣೆಕಟ್ಟು ಹಾಗೂ ಹಾಲಾಡಿಯ ಕೆ.ಎನ್.ಎನ್.ಎಲ್ ನಾಲೆಯಿಂದ ತಾತ್ಕಾಲಿಕವಾಗಿ ನೀರು ನೀಡಲಾಗುತ್ತಿದೆ. ಭರತ್ಕಲ್ ಜಾಕ್‌ವೆಲ್‌ನಿಂದ ಹಾಲಾಡಿ ನೀರು ಶುದ್ದೀಕರಣ ಘಟಕದವರೆಗೆ 3 ಕಿ.ಮೀ ನ ಪೈಪ್‌ಲೈನ್ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಯನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸಬೇಕು ಎಂದರು.ನೀರಿನ ಪೈಪ್‌ಲೈನ್ ಕಾಮಗಾರಿಯು ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಬಾಕಿ ಇದ್ದು, ರಾಹೆ ಪ್ರಾಧಿಕಾರದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಂಡು ಪೂರ್ಣಗೊಳಿಸಬೇಕು ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ 270 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಈ ಹಿಂದೆ 2021 ರಲ್ಲಿ 330 ಕೋಟಿ ರು. ಅಂದಾಜು ವೆಚ್ಚದ ಯೋಜನಾ ವರದಿಯನ್ನು ಕೆ.ಯು.ಡಬ್ಲ್ಯು.ಎಸ್ ಡಿ.ಬಿ. ಮೂಲಕ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ವ್ಯಾಪ್ತಿಯಲ್ಲಿ ಗುಡ್ಡ-ಗಾಡು, ತಗ್ಗು ಪ್ರದೇಶವಾದ್ದರಿಂದ ಅಂದಾಜು ವೆಚ್ಚವು ಜಾಸ್ತಿ ಇದ್ದ ಕಾರಣ ಅನುಮೋದನೆ ದೊರಕಿಲ್ಲ. ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿಯ ಗಮನಕ್ಕೆ ತಂದರು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಐವನ್ ಡಿ ಸೋಜಾ, ಜಿ.ಕೆ. ವೆಂಕಟಶಿವಾರೆಡ್ಡಿ, ಎಂ. ಕೃಷ್ಣಪ್ಪ, ಶಾಂತನಗೌಡ ಡಿ.ಜಿ, ಎಸ್. ಮುನಿರಾಜು, ಟಿ.ಎನ್ ಜವರಾಯ ಗೌಡ, ಸಮಿತಿಯ ಉಪ ಕಾರ್ಯದರ್ಶಿಗಳಾದ ಹರೀಶ ಮತ್ತು ಶ್ರೀವಾತ್ಸವ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.