ಉಡುಪಿ: ಮತ್ತೆ ಗಾಳಿ ಮಳೆ ಆರಂಭ, ಹವಾಮಾನ ಇಲಾಖೆಯ ಎಚ್ಚರಿಕೆ

| Published : Jul 31 2024, 01:15 AM IST

ಉಡುಪಿ: ಮತ್ತೆ ಗಾಳಿ ಮಳೆ ಆರಂಭ, ಹವಾಮಾನ ಇಲಾಖೆಯ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದ್ದು, ಜೊತೆಗೆ ಗಾಳಿಯೂ ಜೋರಾಗಿತ್ತು. ಇನ್ನೂ 4-5 ದಿನ ಇದೇ ರೀತಿ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಮಳೆ ಮತ್ತೆ ಕಾಣಿಸಿಕೊಂಡಿದೆ. ಮಂಗಳವಾರ ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ಗಾಳಿಮಳೆ ಆರಂಭವಾಗಿದೆ. ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದ್ದು, ಜೊತೆಗೆ ಗಾಳಿಯೂ ಜೋರಾಗಿತ್ತು. ಇನ್ನೂ 4-5 ದಿನ ಇದೇ ರೀತಿ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕಳೆದ ಮೂರು ದಿನಗಳಲ್ಲಿ ಮಳೆ ಕಡಿಮೆಯಾಗಿದ್ದರೂ, ಸೋಮವಾರ ಮಧ್ಯರಾತ್ರಿಯೊಮ್ಮೆ ಗಾಳಿ ಮಳೆಯಾಗಿದೆ. ಇದರಿಂದ ಮುಖ್ಯವಾಗಿ ಕಾರ್ಕಳ ಭಾಗದಲ್ಲಿ ಒಂದಷ್ಟು ಮನೆಗಳಿಗೆ ಹಾನಿ ಉಂಟಾಗಿದೆ.

ಕಾರ್ಕಳ ತಾಲೂಕಿನಲ್ಲಿ ಒಟ್ಟು 18 ಮನೆಗಳಿಗೆ ಹಾನಿಯಾಗಿದ್ದು, 6.60 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಅದರಲ್ಲೂ ಕಾರ್ಕಳ ನಗರದ ಪ್ರಶಾಂತ ಆಚಾರ್ಯ ಅವರ ವಾಸದ ಮನೆ ಗಾಳಿ ಮಳೆಯಿಂದ ಬಹುತೇಕ ಹಾನಿಗೊಂಡು 1,50,000 ರು.ಗೂ ಅಧಿಕ ನಷ್ಟ ಸಂಭವಿಸಿದೆ.

ಅಲ್ಲದೇ ಕಾರ್ಕಳ ತಾಲೂಕಿನ ಕುಕ್ಕುಂದೂರು, ಬೋಳ, ಕಣಜಾರು ಗ್ರಾಮಗಳಲ್ಲಿ ಸುಮಾರು 5 ಮಂದಿ ಕೃಷಿಕರ ತೋಟಗಾರಿಕಾ ಬೆಳೆಗಳಿಗೆ ಸುಮಾಕರು 1.05 ಲಕ್ಷ ರು.ಗಳಷ್ಟು ಹಾನಿಯಾಗಿದೆ.

ಕುಂದಾಪುರದಲ್ಲಿ 1 ಮನೆಗೆ ಮತ್ತು 2 ತೋಟಕ್ಕೆ ಸೇರಿ ಒಟ್ಟು 1 ಲಕ್ಷ ರು., ಕಾಪು ತಾಲೂಕಿನಲ್ಲಿ 1 ಮನೆಗೆ 30 ಸಾವಿರ ರು. ಮತ್ತು ಬ್ರಹ್ಮಾವರ ತಾಲೂಕಿನ 1 ಮನೆಗೆ 10 ಸಾವಿರ ರು. ನಷ್ಟವಾಗಿದೆ.

ಕಾಪು ತಾಲೂಕಿನ ನಡಿಪಟ್ಣ ಎಂಬಲ್ಲಿ ಕಡಲುಕೊರೆತ ತೀವ್ರವಾಗಿದ್ದು, ಇಲ್ಲಿನ ಮೀನುಗಾರಿಕಾ ರಸ್ತೆಯಡಿ ಮಣ್ಣು ಕೊಚ್ಚಿ ಹೋಗಿದ್ದು, ರಸ್ತೆಯ ಕಾಂಕ್ರೀಟ್ ಸ್ಲಾಬ್ ಗಳು ಸಮುದ್ರಕ್ಕೆ ಕುಸಿದು ರಸ್ತ ಸಂಪರ್ಕ ಕಡಿದು ಹೋಗಿದೆ.