Udupi: Yakshagana performances in 99 schools from November 16

ಉಡುಪಿ: ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟ್‌ ಗೌರವಾಧ್ಯಕ್ಷ, ಪರ್ಯಾಯ ಶೀರೂರು ಮಠಾಧೀಶರೂ ಆದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಿತು.

ಉಡುಪಿಯ ಶಾಸಕ, ಟ್ರಸ್ಟ್ ಅಧ್ಯಕ್ಷರೂ ಆದ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆಯ ಬಳಿಕ ಕಾರ್ಯದರ್ಶಿ ಮುರಲಿ ಕಡೆಕಾರ್ ಟ್ರಸ್ಟ್‌ ಕಾರ್ಯಚಟುವಟಿಕೆಗಳನ್ನು ಸಭೆಯ ಗಮನಕ್ಕೆ ತಂದರು.

ಉಡುಪಿ, ಕಾಪು, ಕುಂದಾಪುರ, ಬೈಂದೂರು ಈ ನಾಲ್ಕು ವಿಧಾನಸಭಾ ಕ್ಷೇತ್ರದ 99 ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನ ನವೆಂಬರ್ 16 ರಿಂದ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ಜರುಗಲಿದೆ ಎಂದರು. ಪರ್ಯಾಯ ಶ್ರೀಗಳ ಮತ್ತು ನಾಲ್ವರು ಶಾಸಕರ ಪೂರ್ಣ ಸಹಕಾರದಿಂದ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗಿ ಜರುಗುತ್ತಿದೆ ಎಂದು ಎಲ್ಲ ದಾನಿಗಳ ಹಾಗೂ ಯಕ್ಷಗಾನ ಗುರುಗಳ ಸಹಕಾರವನ್ನು ಸ್ಮರಿಸಿದರು.ಪರ್ಯಾಯ ಮಠದ ದಿವಾನರು, ಟ್ರಸ್ಟ್ ನ ಉಪಾಧ್ಯಕ್ಷ ಡಾ.ಉದಯ ಕುಮಾರ್ ಸರಳತ್ತಾಯರು ಉಪಸ್ಥಿತರಿದ್ದರು. ಟ್ರಸ್ಟ್ ನ ವಿಶ್ವಸ್ಥರಾದ ಎಂ. ಗಂಗಾಧರ ರಾವ್, ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ಗಣೇಶ ಬ್ರಹ್ಮಾವರ, ವಿದ್ಯಾಪ್ರಸಾದ್, ಪ್ರಭಾಕರ ಭಂಡಿ, ನಾಗರಾಜ ಹೆಗಡೆ, ಉಮೇಶ ಭಟ್ ಹಾಗೂ ದಾನಿಗಳಾದ ಸುದರ್ಶನ ಮೂರ್ತಿ ದಂಪತಿಗಳು ಸಭೆಯಲ್ಲಿ ಭಾಗವಹಿಸಿದರು. ಇತ್ತೀಚೆಗೆ ಅಗಲಿದ ಯಕ್ಷಗಾನ ಗುರುಗಳು, ಪ್ರಸಾದನ ತಜ್ಞ ಕೃಷ್ಣಸ್ವಾಮಿ ಜೋಶಿ ಸೇವೆ ಸ್ಮರಿಸಲಾಯಿತು.