ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯ ಯಂತ್ರೋಪಕರಣಗಳನ್ನು ಸ್ಥಳಾಂತರಿಸುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದೆ, 30 ವರ್ಷ ಹಳೆಯ ವಸ್ತುಗಳನ್ನೇ ಬಳಸಿಕೊಂಡು ಕೇವಲ ನಾಮಫಲಕ ಬದಲಾಯಿಸುವ ಪ್ರಯತ್ನ ನಡೆಸುತ್ತಿದೆ ಎಂದು ಶಾಸಕ ಯತ್ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿ: ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯ ಯಂತ್ರೋಪಕರಣಗಳನ್ನು ಸ್ಥಳಾಂತರಿಸುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದೆ, 30 ವರ್ಷ ಹಳೆಯ ವಸ್ತುಗಳನ್ನೇ ಬಳಸಿಕೊಂಡು ಕೇವಲ ನಾಮಫಲಕ ಬದಲಾಯಿಸುವ ಪ್ರಯತ್ನ ನಡೆಸುತ್ತಿದೆ ಎಂದು ಶಾಸಕ ಯತ್ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದೊಳಗೆ ಆರೋಗ್ಯ ಇಲಾಖೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಮುನ್ಸೂಚನೆ ಅಥವಾ ಸಾರ್ವಜನಿಕ ಪ್ರಕಟಣೆ ನೀಡದೆ, ಹಳೆ ಆಸ್ಪತ್ರೆಯಲ್ಲಿ ಒಳರೋಗಿಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ಜನರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 110 ಕೋಟಿ ರು. ಅನುದಾನ ಬಿಡುಗಡೆ ಮಾಡಿ, 2021ರಲ್ಲಿ ಕಾಮಗಾರಿ ಆರಂಭಿಸಲಾಗಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಆರೋಗ್ಯ ಸಚಿವ ಯು.ಟಿ. ಖಾದರ್ ಮಾರ್ಚ್ ಒಳಗೆ ಬಾಕಿ ಅನುದಾನ ಬಿಡುಗಡೆ ಮಾಡಿ, ಮೂರು ತಿಂಗಳೊಳಗೆ ಆಸ್ಪತ್ರೆಯನ್ನು ಸಜ್ಜುಗೊಳಿಸುವ ಭರವಸೆ ನೀಡಿದ್ದರು, ಆದರೇ ನೂತನ ಆಸ್ಪತ್ರೆಯಲ್ಲಿ ಕ್ಲಿನಿಕಲ್, ನಾನ್ ಕ್ಲಿನಿಕಲ್ ಸಿಬ್ಬಂದಿ ನೇಮಕಾತಿ ಆಗಿಲ್ಲ, ಸ್ಕ್ಯಾನಿಂಗ್, ಎಕ್ಸರೇ, ಐಸಿಯು, ವೆಂಟಿಲೇಟರ್, ಮೂಲಸೌಕರ್ಯಗಳ ಕೊರತೆಯಿದೆ. ಸರ್ಕಾರ ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಬಿಜೆಪಿ ಅಧ್ಯಕ್ಷ ದಿನೇಸ್ ಅಮಿನ್ ಉಪಸ್ಥಿತರಿದ್ದರು.