ಸಾರಾಂಶ
ಕೃಷ್ಣಮಠದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ 2ನೇ ದಿನವಾದ ಗುರುವಾರ ವಿವಿಧ ವಿಚಾರಗೋಷ್ಠಿಗಳು ರಾಜಾಂಗಣ, ಸಂಸ್ಕೃತ ಕಾಲೇಜು, ಮಧ್ವ ಮಂಟಪ, ಗೀತಾಮಂದಿರ ಇತ್ಯಾದಿ ಕಡೆಗಳಲ್ಲಿ ನಡೆದವು.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣಮಠದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ 2ನೇ ದಿನವಾದ ಗುರುವಾರ ವಿವಿಧ ವಿಚಾರಗೋಷ್ಠಿಗಳು ರಾಜಾಂಗಣ, ಸಂಸ್ಕೃತ ಕಾಲೇಜು, ಮಧ್ವ ಮಂಟಪ, ಗೀತಾಮಂದಿರ ಇತ್ಯಾದಿ ಕಡೆಗಳಲ್ಲಿ ನಡೆದವು.ಮುಖ್ಯವಾಗಿ ರಾಜಾಂಗಣದಲ್ಲಿ ಯುವ ಕವಿ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಇದರ ಅದ್ಯಕ್ಷತೆಯನ್ನು ಭೋಪಾಲ್ ನ ಕೇಂದ್ರಿಯ ಸಂಸ್ಕೃತ ವಿವಿಯ ನಿರ್ದೇಶಕರಾದ ಪ್ರೊ.ರಮಾಕಾಂತ ಪಾಂಡೆ ಅವರು ವಹಿಸಿದ್ದರು. ಕವಿತಲ ಗುರು ವಿವಿಯ ಸಾಹಿತ್ಯ ವಿಭಾಗದ ಪ್ರೊ. ಪರಾಗ್ ಜೋಷಿ ಅವರು ಗೋಷ್ಠಿಯನ್ನು ನಡೆಸಿಕೊಟ್ಟರು.ಈ ಗೋಷ್ಠಿಗೆ ದೇಶಾದ್ಯಂತದಿಂದ 150ಕ್ಕೂ ಹೆಚ್ಚು ಕವಿಗಳಿಂದ ಪ್ರಸ್ತಾಪಗಳು ಬಂದಿದ್ದರೂ, ಆಯ್ದ 18 ರಿಂದ 45 ವರ್ಷದೊಳಗಿನ 15 ಮಂದಿ ಕವಿಗಳಿಗೆ ಅವಕಾಶ ನೀಡಲಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲಿ, ವ್ಯಾಕರಣ - ಛಂದಸ್ಸು ಬದ್ದವಾಗಿ ದೇವತಾಸ್ತುತಿ, ಧಾರ್ಮಿಕ, ಐತಿಹಾಸಿಕ, ಸಾಮಾಜಿಕ ವಿಷಯಗಳನ್ನಾಧರಿಸಿ ಭಜನೆ, ಜನಪದ ರೀತಿಯಲ್ಲಿ ಬರೆದ ಕವಿತೆಗಳು ಪ್ರಸ್ತುತಗೊಂಡವು.ನಂತರ ಕಲ್ಯಾಣಿ ಪಂಡಿತಾ ಪರಿಷತ್ ನಡೆಯಿತು. ಇದು ಮಹಿಳಾ ವಿಧುಷಿಯರಿಗಾಗಿಯೇ ಮೀಸಲಾದ, ಅವರ ವಿದ್ವತ್ತನ್ನು ಪ್ರದರ್ಶಿಸುವ ಮತ್ತುಪರೀಕ್ಷಿಸುವ ವಾಕ್ಯಾರ್ಥಘೋಷ್ಠಿಯಾಗಿತ್ತು.ವಿದುಷಿ ವನಿತಾ ರಾಮಸ್ವಾಮಿ, ಕ್ರೋಡ ಸುಬ್ರಹ್ಮಣ್ಯ ಶಾಸ್ತ್ರಿಗಳು ಉಪಸ್ಥಿತರಿದ್ದರು. 18 ಮಂದಿ ವಿದುಷಿಯರು ಸಾಹಿತ್ಯ, ವ್ಯಾಕರಣ, ವೇದಾಂತ ಶಾಸ್ತ್ರಗಳ ಬಗ್ಗೆ ವಿದ್ವತ್ಪೂರ್ಣವಾಗಿ ವಿಚಾರ ಮಂಡಿಸಿದರು. ಶಿವಕುಮಾರಿ ಅವರು ಗೋಷ್ಠಿಯನ್ನು ಸಂಯೋಜಿಸಿದರು.ಸಂಜೆ ಡಾ. ಮಹೇಶ್ ಭಟ್ ನಿರ್ವಹಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಹೇಂದ್ರ ಸೋಮಯಾಜಿ ಅವರ ನಿರ್ದೇಶನದಲ್ಲಿ ಉಡುಪಿ ಕ್ಷೇತ್ರ ವೈಭವಂ ಎಂಬ ಯಕ್ಷಗಾನ ರೂಪಕ ಪ್ರಸ್ತುತವಾಯಿತು.