ಯುಜಿ ಕೇಬಲ್ ಕಾಮಗಾರಿ ಅವೈಜ್ಞಾನಿಕ: ದೂರು

| Published : Nov 26 2024, 12:45 AM IST

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಮುಖ್ಯರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಿಂದ ಚಿಕ್ಕಮಗಳೂರು ರಸ್ತೆ ರೋಟರಿ ವೃತ್ತದವರೆಗೆ ನಡೆಯುತ್ತಿರುವ ವಿದ್ಯುತ್ ಕಂಬದ ಯುಜಿ ಕೇಬಲ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಯುಜಿ ಕೇಬಲ್‌ ಬಾಕ್ಸ್ ಚರಂಡಿಯಲ್ಲಿ ಅಳವಡಿಸದೆ ಫುಟ್‌ಪಾತ್ ಬದಿ ಅಳವಡಿಕೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಮುಖ್ಯರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಿಂದ ಚಿಕ್ಕಮಗಳೂರು ರಸ್ತೆ ರೋಟರಿ ವೃತ್ತದವರೆಗೆ ನಡೆಯುತ್ತಿರುವ ವಿದ್ಯುತ್ ಕಂಬದ ಯುಜಿ ಕೇಬಲ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದಲ್ಲಿ 36 ಅತ್ಯಾಧುನಿಕ ಬೀದಿ ದೀಪಗಳನ್ನು ಅಳವಡಿಸಲು ಶಾಸಕ ರಾಜೇಗೌಡರ ಅನುದಾನದಲ್ಲಿ ಮಂಜೂರಾದ ₹50 ಲಕ್ಷದಲ್ಲಿ ಕಾಮಗಾರಿ ಆರಂಭವಾಗಿದೆ. ಆದರೆ ಬೀದಿದೀಪದ ಕಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್‌ಗಳನ್ನು ಮುಖ್ಯರಸ್ತೆಯ ಬಾಕ್ಸ್ ಚರಂಡಿ ಒಳಗೆ ಯುಜಿ ಕೇಬಲ್‌ಗೆ ಮೀಸಲಿಟ್ಟ ಜಾಗದಲ್ಲಿ ಅಳವಡಿಸದೆ ಫುಟ್‌ಪಾತ್ ಬದಿಯಲ್ಲಿ ಅಳವಡಿಸುತ್ತಿದ್ದಾರೆ.

ಇದರಿಂದ ಸಾರ್ವಜನಿಕರಿ, ಮುಖ್ಯರಸ್ತೆ ಅಗಲೀಕರಣಕ್ಕೆ ತೊಂದರೆಯಾಗಲಿದ್ದು ಫುಟ್‌ಪಾತ್ ಬದಿಯಲ್ಲಿ ವಿದ್ಯುತ್ ಕೇಬಲ್‌ ಹಾಕುವುದರಿಂದ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಗುತ್ತಿಗೆದಾರರು, ಅಧಿಕಾರಿಗಳು ಗಮನಿಸಿ ಅಂಡರ್‌ಗ್ರೌಂಡ್ ಮೂಲಕವೇ ವಿದ್ಯುತ್ ಕೇಬಲ್ ಅಳವಡಿಸುವಂತೆ ಉದ್ಯಮಿ ಮಹಮ್ಮದ್ ರಫೀಕ್ ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಈ ಹಿಂದೆ ರಸ್ತೆ ಅಗಲೀಕರಣ ವೇಳೆಯಲ್ಲಿ ಅಂಡರ್ ಗ್ರೌಂಡ್ ಕೇಬಲ್‌ಗಳಿಗೆ ಬಾಕ್ಸ್ ಚರಂಡಿ ನಿರ್ಮಿಸಿದ್ದರೂ ಗುತ್ತಿಗೆದಾರರು ವಿದ್ಯುತ್ ಕೇಬಲ್‌ಗಳನ್ನು ಅದರೊಳಗೆ ಹಾಕದೆ ಹೊರಭಾಗದಲ್ಲಿ ಅಳವಡಿಸುತ್ತಿರುವುದು ಅವೈಜ್ಞಾನಿಕ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಾಕ್ಸ್ ಚರಂಡಿ, ಫುಟ್‌ಪಾತ್ ಕಾಮಗಾರಿ ಪೂರ್ಣಗೊಂಡಿರುವುದರಿಂದ ಯುಜಿ ಕೇಬಲ್‌ಗಳನ್ನು ಒಳಗೆ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಫುಟ್‌ಪಾತ್ ಕಿತ್ತರೆ ಅಂದ ಹಾಳಾಗಲಿದೆ. ಈ ಹಿನ್ನೆಲೆಯಲ್ಲಿ ಕೇಬಲ್ ಹೊರಭಾಗದಲ್ಲಿ ಅಳವಡಿಸಲಾಗುತ್ತಿದೆ. ಸುರಕ್ಷಿತ ಪೈಪ್ ಒಳಭಾಗದಲ್ಲಿ ವಿದ್ಯುತ್ ಕೇಬಲ್ ಹಾಕಲಾಗುತ್ತಿದೆ. ಯಾವುದೇ ಅನಾಹುತ ಸಂಭವಿಸಲ್ಲ ಎಂದು ಗುತ್ತಿಗೆದಾರ ಶ್ರೀಕಂಠ ಹೇಳಿದ್ದಾರೆ.- ಕೋಟ್ ೧-

ಯುಜಿ ಕೇಬಲ್‌ಗಳನ್ನು ಫುಟ್‌ಪಾತ್ ಹೊರಭಾಗದಲ್ಲಿ ಹಾಕುತ್ತಿರುವ ಬಗ್ಗೆ ದೂರು ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಯುಜಿ ಕೇಬಲ್‌ಗಳನ್ನು ನಿಯಮದಂತೆ ಹೊರಕ್ಕೆ ಅಳವಡಿಸುವಂತಿಲ್ಲ.--ಲೋಕೇಶಪ್ಪ, ಎಂಜಿನಿಯರ್.

ಪಿ.ಡಬ್ಲ್ಯೂ.ಡಿ ೨೫ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಮುಖ್ಯರಸ್ತೆಯಲ್ಲಿ ಅಳವಡಿಸುವ ಬೀದಿ ದೀಪದ ಕೇಬಲ್‌ಗಳನ್ನು ಫುಟ್‌ಪಾತ್ ಬದಿಯಲ್ಲಿ ಅಳವಡಿಸುತ್ತಿರುವುದು.