ಸಾರಾಂಶ
ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಯುಗಾದಿ ಹಬ್ಬದ ನಿಮಿತ್ತ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ಮಲೆನಾಡಿನ ಸುಪ್ರಸಿದ್ಧ ಕ್ಷೇತ್ರವಾದ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಯುಗಾದಿ ಹಬ್ಬದ ನಿಮಿತ್ತ ವಿವಿಧೆಡೆಯಿಂದ ಭಕ್ತರು ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ತಾಲೂಕು ಸೇರಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಭಕ್ತರ ಆರಾಧ್ಯ ದೇವತೆ ಶ್ರೀ ರೇಣುಕಾಂಬೆ ದರ್ಶನ ಪಡೆದರು. ಯುಗಾದಿ ಹಬ್ಬದ ಹಿನ್ನೆಲೆ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರುಗಳಿಗೆ ವಿಶೇಷ ಪೂಜೆ ನೆರವೇರಿದವು,
ದೇವಿಯ ಹೆಸರಿನಲ್ಲಿ ಭಕ್ತರು ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚುವುದು, ತುಲಾಭಾರ ಹರಕೆ ಸೇರಿದಂತೆ ವಿವಿಧ ಸೇವೆ ಮುಂತಾದವುಗಳನ್ನು ಆಚರಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತರು ಬೇವು-ಬೆಲ್ಲವನ್ನು ಹಂಚಿ ಸಂಭ್ರಮಿಸಿದರು.ದೇವಾಲಯಗಳಲ್ಲಿ ಪೂಜೆ:
ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ, ವೀರಭದ್ರಸ್ವಾಮಿ ದೇವಸ್ಥಾನ, ಮಹಾ ಗಣಪತಿ ದೇವಸ್ಥಾನ, ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ಜನರು ಸಂಜೆ ವೇಳೆ ತಮ್ಮ ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಕುಟುಂಬಸ್ಥರು ಸೇರಿ ಸಂತೋಷದ ಕ್ಷಣಗಳೊಂದಿಗೆ ಚಂದ್ರ ದೇವರ ದರ್ಶನ ಪಡೆದು ಬೇವು-ಬೆಲ್ಲವನ್ನು ಹಂಚಿ ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹರುಷ ತರಲಿ ಎಂದು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರು.ಪ್ರತಿ ವರ್ಷದಂತೆ ಈ ವರ್ಷವೂಯುಗಾದಿ ಹಬ್ಬದ ಅಂಗವಾಗಿ ದೇವಸ್ಥಾನದ ಆಡಳಿತ ಕಚೇರಿ ವತಿಯಿಂದ ಭಕ್ತರಿಗೆ ವಿಶೇಷವಾಗಿ ಕೋಸುಂಬರಿ ಪ್ರಸಾದ ಹಾಗೂ ಪಾನಕ ವಿತರಿಸಿದರು.