ಪವಾಡ ಪುರುಷ ಮಂಟೇಸ್ವಾಮಿ ಮಠದಲ್ಲಿ ನಾಳೆ ಯುಗಾದಿ ಜಾತ್ರೆ

| Published : Apr 08 2024, 01:01 AM IST

ಸಾರಾಂಶ

ಪವಾಡ ಪುರುಷ ಶ್ರೀ ಮಂಟೇಸ್ವಾಮಿ ಉತ್ತರ ನಾಡಿನಿಂದ ಬಂದು ಬಿ.ಜಿ.ಪುರದಲ್ಲಿ ಐಕ್ಯವಾಗಿದ್ದು, ಪ್ರತಿವರ್ಷ ಯುಗಾದಿ ಹಬ್ಬದ ಮುನ್ನಾ ದಿನ ಲಕ್ಷಾಂತರ ಮಂದಿ ಭಕ್ತರು ಜನರು ಬಂದು ಮಂಟೇಸ್ವಾಮಿ ಅವರ ಗದ್ದುಗೆ ದರ್ಶನ ಪಡೆಯುತ್ತಾರೆ. ಇದಕ್ಕೆ ಮಠ ನುಗ್ಗುವುದು (ಎದುರುಸೇವೆ) ಎಂದು ಕರೆಯಲಾಗುತ್ತದೆ. ಏ.8ರಂದು ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಮಂಟೇಸ್ವಾಮಿ ಮಠಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ರಾಜಬೊಪ್ಪೆಗೌಡನಪುರ(ಬಿ.ಜಿ.ಪುರ) ಧರೆಗೆ ದೊಡ್ಡವರ ಸನ್ನಿಧಿಯಲ್ಲಿ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಾಡ ಪುರುಷ ಶ್ರೀ ಮಂಟೇಸ್ವಾಮಿ ಮಠದಲ್ಲಿ ಏ.8 ರಂದು ನಡೆಯುವ ಮಠ ನುಗ್ಗುವಿಕೆ(ಎದುರು ಸೇವೆ) ಹಾಗೂ ಯುಗಾದಿ ಜಾತ್ರೆ ನಡೆಯಲಿದೆ.

ಪವಾಡ ಪುರುಷ ಶ್ರೀ ಮಂಟೇಸ್ವಾಮಿ ಉತ್ತರ ನಾಡಿನಿಂದ ಬಂದು ಬಿ.ಜಿ.ಪುರದಲ್ಲಿ ಐಕ್ಯವಾಗಿದ್ದು, ಪ್ರತಿವರ್ಷ ಯುಗಾದಿ ಹಬ್ಬದ ಮುನ್ನಾ ದಿನ ಲಕ್ಷಾಂತರ ಮಂದಿ ಭಕ್ತರು ಜನರು ಬಂದು ಮಂಟೇಸ್ವಾಮಿ ಅವರ ಗದ್ದುಗೆ ದರ್ಶನ ಪಡೆಯುತ್ತಾರೆ. ಇದಕ್ಕೆ ಮಠ ನುಗ್ಗುವುದು (ಎದುರುಸೇವೆ) ಎಂದು ಕರೆಯಲಾಗುತ್ತದೆ.

ಏ.8ರಂದು ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಮಂಟೇಸ್ವಾಮಿ ಮಠಕ್ಕೆ ಆಗಮಿಸುವ ನಿರೀಕ್ಷೆ ಇದೆ. ಉತ್ತರನಾಡಿನ ಕೊಡೆಕಲ್ ಪರಂಪರೆಯ ಶ್ರೀ ಮಂಟೇ ಸ್ವಾಮಿ ಅವರು 12ನೇ ಶತಮಾನದಲ್ಲಿ ಜನರಲ್ಲಿರುವ ಅಹಂಕಾರ, ಮೂಢನಂಬಿಕೆ ಗಳನ್ನು ತೊಲಗಿಸಲು ಮುಂದಾಗುತ್ತಾರೆ. ಆದರಲ್ಲೂ ಅಮಾವಾಸ್ಯೆ ಸೋಮವಾರ ದಂದು ಆಶುಭ ಎನ್ನುವ ದಿನಗಳಲ್ಲಿ ಅವರು ಉತ್ತಮ ನಿರ್ಣಯ ಕೈಗೊಂಡರು ಎಂದು ಹೇಳಲಾಗುತ್ತದೆ.

ಮಂಟೇಸ್ವಾಮಿ ಅವರು ಸಮಾಜದಲ್ಲಿನ ಮೌಢ್ಯತೆ ಹೋಗಲಾಡಿಸಲು ಉತ್ತರನಾಡಿನಿಂದ ಬಂದು ಬಿ.ಜಿ.ಪುರ ಗ್ರಾಮದಲ್ಲಿ ಐಕ್ಯವಾಗಿದ್ದು, ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ದಿನ ಲಕ್ಷಾಂತರ ಮಂದಿ ಭಕ್ತರು ಬಂದು ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆಯುತ್ತಾರೆ. ಮಠಕ್ಕೆ ನುಗ್ಗುವ ಮುನ್ನ ಸಾವಿರಾರು ಭಕ್ತರು ಕೆ.ಆರ್. ನಗರದ ಕಪ್ಪಡಿ ಜಾತ್ರೆಯಿಂದ ಬಂದು ಮಂಟೇಸ್ವಾಮಿ ಮಠದ ಏಳೆಂಟು ಕಿಮೀ ದೂರದ ಪೂರಿಗಾಲಿ, ಮುಟ್ಟನಹಳ್ಳಿ, ಬಳ್ಳಗೆರೆ ತೋಪುಗಳಲ್ಲಿ ವಾಸ್ತವ್ಯ ಹೂಡಿ ಏ.8ರಂದು ಎಲ್ಲರೂ ನಡೆದುಕೊಂಡು ಬಂದು ಮುಟ್ಟನಹಳ್ಳಿ ತೋಪಿನ ಜಾತ್ರೆಯಲ್ಲಿ ಪಾಲ್ಗೊಂಡು ನಂತರ ಮಠಕ್ಕೆ ನುಗ್ಗುತ್ತಾರೆ. ಈ ವೇಳೆ ಅಲ್ಲಲ್ಲಿ ಕುಡಿಯಲು ನೀರು, ಪಾನಕ, ಮಜ್ಜಿಗೆಯನ್ನು ಹರಕೆಹೊತ್ತ ಭಕ್ತರು ಜನರಿಗೆ ವಿತರಿಸುತ್ತಾರೆ.

ಮಠಕ್ಕೆ ನುಗ್ಗಿದ ನಂತರ ಭಕ್ತರು ಮಠದಲ್ಲಿ ಪ್ರಸಾದ ಸೇವಿಸಿ ಏ.9ರಂದು ಯುಗಾದಿ ಹಬ್ಬ ಆಚರಿಸಲು ಗ್ರಾಮಗಳಿಗೆ ತೆರಳುತ್ತಾರೆ. ಮರು ದಿನ ಪಂಕ್ತಿಸೇವೆ, ಸಾರಪಂಕ್ತಿ ಸೇರಿದಂತೆ ಒಟ್ಟು 5 ಪಂಕ್ತಿಗಳು ನಡೆಯುವುದು ವಾಡಿಕೆ. ಒಂದು ವರ್ಷ ಮಳವಳ್ಳಿ ಮಠದ ಸ್ವಾಮೀಜಿ ಹಾಗೂ ಮತ್ತೊಂದು ವರ್ಷ ಬಿ.ಜಿ.ಪುರದ ಮಠದ ಸ್ವಾಮೀಜಿ (ಎದುರುಸೇವೆ) ಮಠ ನುಗ್ಗುವ ಪದ್ಧತಿ ನಡೆದು ಬಂದಿದೆ.

ಈ ವರ್ಷ ಮಳವಳ್ಳಿ ಶ್ರೀ ಮಂಟೇಸ್ವಾಮಿ ಮಠದ ಮಠಾಧಿಪತಿ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಸ್ವಾಮೀಜಿ ರಾಜಬೀದಿಯ ಮೂಲಕ ಮಠ ನುಗ್ಗುತ್ತಾರೆ. ಅವರನ್ನು ಬಿ.ಜಿ.ಪುರದ ಮಂಟೇಸ್ವಾಮಿ ಮಠದ ಪೀಠಾಧಿಕಾರಿ ಶ್ರೀ ಜ್ಞಾನಾನಂದ ಚೆನ್ನರಾಜ್ ಅರಸು ಸ್ವಾಮೀಜಿಗಳ ಜೊತೆಯಲ್ಲಿ ಪಟ್ಟದ ಬಸವ ಹಾಗೂ ಕೊಂಬು, ಕಹಳೆ ಕಂಡಾಯಗಳ ಸಮೇತ ಮಠದ ಒಳಗಡೆ ಬರಮಾಡಿಕೊಳ್ಳುತ್ತಾರೆ. ನೀಲಗಾರರು ಸಾಂಪ್ರಾದಾಯಿಕ ಪೂಜೆಯಲ್ಲಿ ಪಾಲ್ಗೊಳ್ಳುವರು.