ಶಿವಮೊಗ್ಗದಲ್ಲಿ ಯುಗಾದಿ ಹಬ್ಬದ ಖರೀದಿ ಜೋರು

| Published : Apr 09 2024, 12:46 AM IST

ಸಾರಾಂಶ

ಶಿವಮೊಗ್ಗದಲ್ಲಿ ಯುಗಾದಿ ಹಬ್ಬ ಹಿನ್ನೆಲೆ ಸೋಮವಾರ ಗಾಂಧಿಬಜಾರ್‌ನಲ್ಲಿ ಖರೀದಿಗೆ ಜಮಾಯಿಸಿದ್ದ ಜನ. ಹಬ್ಬಕ್ಕೆ ಮಾವಿನ ಸೊಪ್ಪು, ಬೇವಿನ ಸೊಪ್ಪನ್ನು ಖರೀದಿಸುತ್ತಿರುವ ಜನರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆ ಕಾವು ಹಾಗೂ ಬಿಸಿಲ ಝಳದ ನಡುವೆಯೂ ಜಿಲ್ಲೆ ಎಲ್ಲಡೆ ಹೊಸ ವರ್ಷ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬಕ್ಕೆ ಸಿದ್ಧತೆಗಳು ಜೋರಾಗಿಯೇ ನಡೆದಿದೆ.

ಹಬ್ಬದ ಮುನ್ನದಿನವಾದ ಸೋಮವಾರ ಯುಗಾದಿ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿ ಸಾಗಿದೆ.

ಯುಗಾದಿ ಹಬ್ಬಕ್ಕೆಂದು ಜನ ಮಾರುಕಟ್ಟೆಗೆ ಬಂದು ಖರೀದಿಯಲ್ಲಿ ತೊಡಗಿರುವುದು ಹಬ್ಬದ ಸಂಭ್ರಮವನ್ನು ಸಾಕ್ಷೀಕರಿಸುತ್ತಿದೆ. ಮಾರುಕಟ್ಟೆಯಲ್ಲಿ ಜನಸಾಗರವೇ ಕಂಡು ಬರುತ್ತಿದೆ.

ಯುಗಾದಿ ಹಬ್ಬದ ಖರೀದಿ ಕಳೆದೊಂದು ವಾರದಿಂದ ನಡೆಯುತ್ತಿದ್ದು, ನಗರದ ಪ್ರಮುಖ ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳಲ್ಲಿ ಜನ ಸಂದಣಿ ಇತ್ತು.

ನಗರದ ಗಾಂಧಿ ಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ ಸೇರಿ ವಿವಿಧಡೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟ ಜೋರಾಗಿ ಸಾಗಿದೆ.

ಯುಗಾದಿ ಹಬ್ಬಕ್ಕೆ ಬಟ್ಟೆ, ಮಾವಿನ ತೋರಣ, ಬೇವಿನ ಸೊಪ್ಪು, ಉಡುದಾರ, ಬಳೆ ಸೇರಿ ಮಹಿಳೆಯರ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು. ಈ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಸುಡು ಬಿಸಿಲಿಗೂ ಜಗ್ಗದ ಜನರು ಖರೀದಿಯಲ್ಲಿ ತಲ್ಲೀನರಾಗಿದ್ದರು.

ನಗರದ ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ಬೀದಿ ಬದಿ ವ್ಯಾಪಾರಿಗಳು ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಳ್ಳುವಂತೆ ರಸ್ತೆಯಲ್ಲಿ ಕೂಗುತ್ತಿದ್ದ ದೃಶ್ಯ ಕಂಡುಬಂದಿತು. ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು. ಬಹುತೇಕ ಕಡೆಗಳಲ್ಲಿ ಚೌಕಾಸಿ ಮಾಡದೆ ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಯುಗಾದಿ ಹಬ್ಬದ ಕಾರಣಕ್ಕೆ ಹೂವು, ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಬ್ಬಕ್ಕಾಗಿ ಹಣ್ಣು, ಪೂಜಾ ಸಾಮಗ್ರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿಗೂ ಜನ ಮುಗಿ ಬಿದ್ದಿದ್ದರು.

ಹಳದಿ, ಕಲರ್ ಸೇವಂತಿಗೆ, ಕನಕಾಂಬರ, ಕಾಕಡ, ಬಟನ್ಸ್, ಮೊಲ್ಲೆ, ದುಂಡು ಮಲ್ಲಿಗೆ ಹೀಗೆ ಹೂವುಗಳ ಬೆಲೆ ಮಾರಿಗೆ 150ರಿಂದ 200 ರು. ಗಡಿ ದಾಟಿದ್ದು, ಮತ್ತಷ್ಟು ದರ ಹೆಚ್ಚಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ಇದಕ್ಕೆ ಹಣ್ಣಿನ ದರ ಸಹ ಹೊರತಾಗಿಲ್ಲ.

ಮೂಸಂಬಿ 60, ದ್ರಾಕ್ಷಿ 100, ಸೇಬು 260, ಬಾಳೆಹಣ್ಣು 60ರಿಂದ 80, ಕಿತ್ತಳೆ 80ರಿಂದ 100ರು. ಇದೆ. ಹಬ್ಬಕ್ಕೆ ಬೇಕಾದ ಮಾವಿನ ಸೊಪ್ಪು ಕಹಿಬೇವಿನ ಸೊಪ್ಪು ಕೂಡ ಕರೀರಿ ಜೋರಾಗಿ ಸಾಗಿದೆ.