ಸನಾತನ ಧರ್ಮದ ನೂತನ ವರ್ಷ ಯುಗಾದಿ

| Published : Apr 09 2024, 12:51 AM IST

ಸಾರಾಂಶ

ಭಾರತೀಯರು ಯುಗಾದಿಯನ್ನೇ ಹೊಸ ವರ್ಷ, ಪವಿತ್ರವಾದ ದಿನ ಎಂದು ಆಚರಿಸುವುದು ಗೊತ್ತಿರುವ ಮಾತು. ಇದೀಗ ಮಂಗಳವಾರ ಯುಗಾದಿ ಆಚರಿಸಲು ಧಾರವಾಡ ಜನತೆ ಸಿದ್ಧರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಹಿಂದೂಗಳಿಗೆ ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಸನಾತನ ಧರ್ಮದ ನೂತನ ವರ್ಷ ಯುಗಾದಿ. ಭಾರತೀಯರು ಯುಗಾದಿಯನ್ನೇ ಹೊಸ ವರ್ಷ, ಪವಿತ್ರವಾದ ದಿನ ಎಂದು ಆಚರಿಸುವುದು ಗೊತ್ತಿರುವ ಮಾತು. ಇದೀಗ ಮಂಗಳವಾರ ಯುಗಾದಿ ಆಚರಿಸಲು ಧಾರವಾಡ ಜನತೆ ಸಿದ್ಧರಾಗಿದ್ದಾರೆ.

ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇದೆ. ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿ ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವಾಗಿದೆ.

ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ.

ಮಂಗಳ ಕಾರ್ಯಕ್ಕೆ ಶುಭ ದಿನ

ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ಎಂದು ಗೃಹ ಪ್ರವೇಶ, ಮನೆ ನಿರ್ಮಾಣದ ಆರಂಭ ಸೇರಿದಂತೆ ಉತ್ತಮ ಕೆಲಸಗಳನ್ನು ಇಟ್ಟುಕೊಳ್ಳಲಾಗಿದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲ ಹಿಂದೂಗಳೂ ಆಚರಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳನ್ನು ಸಿಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.

ಬೇವು ಬೆಲ್ಲದ ಮಿಶ್ರಣ..

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸುತ್ತಾರೆ. ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಎಳೆಯ ಹಸಿರು ಮಾವಿನೆಲೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು ಸೇರಿಸಿ ತೋರಣವನ್ನು ಕಟ್ಟುವುದು ರೂಢಿ. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಬೇವು-ಬೆಲ್ಲವು, ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.

ಇನ್ನು, ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಬೇವು-ಬೆಲ್ಲ, ಸಿಹಿ ತಿಂಡಿಗಳ ಮಾರಾಟ, ಹೊಸ ಬಟ್ಟೆಗಳ ಖರೀದಿ ಜೋರಾಗಿತ್ತು. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಎಲ್ಲ ತರಗತಿಗಳ ಪರೀಕ್ಷೆಗಳು ಮುಗಿದಿದ್ದು, ಮಕ್ಕಳೂ ಸಹ ಹಬ್ಬವನ್ನು ಆಚರಿಸಲು ತುದಿಗಾಲಿನ ಮೇಲಿದ್ದಾರೆ.