ಯುಗಾದಿ ಚಂದ್ರದರ್ಶನ: ಬೇವು-ಬೆಲ್ಲದ ಸಂಭ್ರಮ

| Published : Apr 01 2025, 12:47 AM IST

ಸಾರಾಂಶ

ಜಿಲ್ಲಾದ್ಯಂತ ಜನತೆ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬ ಆಚರಿಸಿದರು. ನೂತನ ವಿಶ್ವಾವಸುನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಪ್ರಯುಕ್ತ ಬಹಳ ಜನರು ಭಾನುವಾರ ಅಮವಾಸ್ಯೆ ಪೂಜೆ ನೆರವೇರಿಸಿದ್ದರು. ಭಾನುವಾರ ಎಲ್ಲರ ಮನೆಗಳಲ್ಲಿ ಕೂಡ ಬೇವು-ಬೆಲ್ಲ, ಶ್ಯಾವಿಗೆ, ಕೆಲವರು ಹೋಳಿಗೆ, ಸಿಹಿ ಭೋಜನ ಸವಿದು ಸಂಭ್ರಮದಿಂದ ಯುಗಾದಿ ಆಚರಿಸಿದರು.

- ವಿಶ್ವಾವಸುನಾಮ ಸಂವತ್ಸರಕ್ಕೆ ಸ್ವಾಗತ । ಹಿರಿಯ ಶಾಸಕ, ಸಚಿವ, ಸಂಸದರಿಂದ ಯುಗಾದಿ ಶುಭಾಶಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲಾದ್ಯಂತ ಜನತೆ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬ ಆಚರಿಸಿದರು. ನೂತನ ವಿಶ್ವಾವಸುನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಪ್ರಯುಕ್ತ ಬಹಳ ಜನರು ಭಾನುವಾರ ಅಮವಾಸ್ಯೆ ಪೂಜೆ ನೆರವೇರಿಸಿದ್ದರು. ಭಾನುವಾರ ಎಲ್ಲರ ಮನೆಗಳಲ್ಲಿ ಕೂಡ ಬೇವು-ಬೆಲ್ಲ, ಶ್ಯಾವಿಗೆ, ಕೆಲವರು ಹೋಳಿಗೆ, ಸಿಹಿ ಭೋಜನ ಸವಿದು ಸಂಭ್ರಮದಿಂದ ಯುಗಾದಿ ಆಚರಿಸಿದರು.

ಸೋಮವಾರ ಬೆಳಗ್ಗೆ ಚೈತ್ರ ಶುಕ್ಲ ಪಾಡ್ಯದಂದು ಯುಗಾದಿ ಸಂಭ್ರಮ ಮನೆಗಳಲ್ಲಿ ಮನೆಮಾಡಿತ್ತು. ಜಿಲ್ಲಾದ್ಯಂತ ಜನರು ಸಂಜೆ ಚಂದ್ರ ದರ್ಶನ ಮೂಲಕ ಯುಗಾದಿ ಆಚರಿಸಿದರು. ಮನೆಯಂಗಳಗಳಲ್ಲಿ ಬಣ್ಣಬಣ್ಣದ ರಂಗೋಲಿ ಚಿತ್ತಾರ ಕಂಡುಬಂದವು. ಬೇವು, ಮಾವಿನ ತೋರಣ, ಹೂವಿನ ಅಲಂಕಾರದೊಂದಿಗೆ ಮನೆ ಬಾಗಿಲುಗಳು ಅಲಂಕಾರಗೊಂಡಿದ್ದವು. ಯುಗಾದಿಯ ಪ್ರಾತಃಕಾಲ ಹಾಗೂ ಬೆಳಗಿನ ಪೂಜಾ ವಿಧಿವಿಧಾನಗಳು ನಡೆದವು.

ಸೋಮವಾರ ಸಂಜೆ ಇನ್ನೂ ಸ್ವಲ್ಪ ಬೆಳಕು ಇರುವಾಗಲೇ ಚಂದ್ರದರ್ಶನಕ್ಕೆ ಎಲ್ಲಿಲ್ಲದ ಸಂಭ್ರಮ, ಕುತೂಹಲ, ಸಡಗರ ಕಂಡುಬಂದಿತು. ಜನರು ಅಲ್ಲಲ್ಲಿ ಜಮಾಯಿಸತೊಡಗಿದರು. ರಸ್ತೆ, ಮನೆಯ ಟೆರೇಸ್‌ಗಳ ಮೇಲೇರಿದ ಜನರು ಆಕಾಶದತ್ತ ಮುಖ ಮಾಡಿದ್ದರು. ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯನ ಸಂಜೆ ಕಿರಣಗಳ ಮಧ್ಯೆ ವರ್ಷದ ಮೊದಲ ಚಂದ್ರನನ್ನು ಕಣ್ತುಂಬಿಕೊಳ್ಳಲು ಜನರು ಪ್ರಯತ್ನಿಸುತ್ತಿದ್ದರು. ಚಂದ್ರನನ್ನು ಕಂಡವರು ಇತರರಿಗೂ ಕೈ ಮಾಡಿ ತೋರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಂದ್ರ ದರ್ಶನ ಮಾಡಿದವರು ಕೈಮುಗಿದು ನಮಸ್ಕರಿಸಿದರು.

ಹಿರಿಯರ ಆಶೀರ್ವಾದ ಪಡೆಯುವ ಜೊತೆಗೆ ಬಂಧು-ಮಿತ್ರರೊಂದಿಗೆ ಹಬ್ಬದ ಶುಭಾಶಯ ಹಂಚಿಕೊಂಡರು. ಪುಟ್ಟ ಮಕ್ಕಳು, ಯುವತಿಯರು ಅಕ್ಕಪಕ್ಕದವರ ಮನೆಗೆ ತೆರಳಿ ಬೇವು-ಬೆಲ್ಲ ಹಂಚಿದರು. ಹಬ್ಬದೂಟ ಸವಿಯುವ ಮೂಲಕ ನೂತನ ವಿಶ್ವಾವಸುನಾಮ ಸಂವತ್ಸರವನ್ನು ಬರಮಾಡಿಕೊಂಡರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರನ್ನು ಸಮಾಜದ ಮುಖಂಡರು, ಸ್ನೇಹಿತರು, ಇತರರು ಭೇಟಿ ಮಾಡಿ ಯುಗಾದಿ ಶುಭಾಶಯ ಕೋರಿದರು.

- - - (** ಈ ಸುದ್ದಿಗೆ ಕ್ಯಾಪ್ಷನ್‌ನಲ್ಲಿರುವ ಒಂದು ಫೋಟೋ ಬಳಸಿ)