ಸಾರಾಂಶ
ಯುಜಿಸಿಇಟಿ 2024 ಆನ್‌ಲೈನ್ ಅರ್ಜಿವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ಯುಜಿಸಿಇಟಿ 2024 ಆನ್‌ಲೈನ್ ಅರ್ಜಿಯಲ್ಲಿ ಕ್ಲೇಮು ಮಾಡಿರುವ ವಿವಿಧ ಮೀಸಲಾತಿಗೆ ಅನುಗುಣವಾಗಿ ಆನ್‌ಲೈನ್ ಪರಿಶೀಲನೆ ನಡೆಸಿದ್ದು, ಅದರ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.ಅಭ್ಯರ್ಥಿಗಳು ಕ್ಲೇಮು ಮಾಡಿರುವಂತೆ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಜಾತಿ, ಆದಾಯ ಪ್ರಮಾಣದ ಪತ್ರದ ಆರ್‌ಡಿ ಸಂಖ್ಯೆ ಆಧರಿಸಿ ಮೀಸಲಾತಿ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) 371(ಜೆ), ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್ ಸರ್ವೀಸ್ ಮೂಲಕ ಪರಿಶೀಲಿಸಲಾಗಿದೆ. ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವಿವರಗಳನ್ನು ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್ ಅನ್ನು ಸದ್ಯದಲ್ಲಿಯೇ ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಿದೆ.
ಅಭ್ಯರ್ಥಿಗಳು ವೇಳಾಪಟ್ಟಿ ಅನುಸಾರ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸುಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.