ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಉಗ್ರಪ್ಪ, ದೇವೇಂದ್ರಪ್ಪ

| Published : Apr 16 2024, 01:00 AM IST

ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಉಗ್ರಪ್ಪ, ದೇವೇಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ವಿರುದ್ಧ 85,144 ಮತಗಳ ಅಂತರದ ಗೆಲುವು ದಾಖಲಿಸಿದ್ದರು.

ಕೆ.ಎಂ.ಮಂಜುನಾಥ್

ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೈ-ಕಮಲ ಟಿಕೆಟ್ ವಂಚಿತರಾದ ವಿ.ಎಸ್. ಉಗ್ರಪ್ಪ ಹಾಗೂ ವೈ.ದೇವೇಂದ್ರಪ್ಪ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದು ರಾಜಕೀಯದಲ್ಲಿ ನಾನಾ ವಿಶ್ಲೇಷಣೆಗಳಿಗೆ ಆಸ್ಪದ ಒದಗಿಸುತ್ತಿದೆ. ಈ ಚುನಾವಣೆಯಲ್ಲಿ ಟಿಕೆಟ್‌ ವಂಚಿತರು ಅಭ್ಯರ್ಥಿಗಳ ಪರ ತಿರುಗಾಟ ನಡೆಸಿ, ಪ್ರಚಾರ ಕೈಗೊಳ್ಳುವರೇ ಎಂಬ ಪ್ರಶ್ನೆ ಉದ್ಭವಿಸಿದೆ.

ಎಲ್ಲೂ ಕಾಣಿಸದ ಉಗ್ರಪ್ಪ:

2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ವಿರುದ್ಧ 85,144 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಬಳಿಕ ಶ್ರೀರಾಮುಲು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಇದರಿಂದಾಗಿ 2018ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಬಿಜೆಪಿಯ ಜೆ.ಶಾಂತಾ ವಿರುದ್ಧ 2,43,161 ಮತಗಳ ಭಾರೀ ಅಂತರದ ಗೆಲುವು ದಾಖಲಿಸಿ, ಲೋಕಸಭೆ ಪ್ರವೇಶಿಸಿದರು.

2024ರ ಲೋಕ ಚುನಾವಣೆಯಲ್ಲೂ ತನಗೆ ಟಿಕೆಟ್ ಸಿಗುವುದು ಖಚಿತ ಎಂಬ ಪೂರ್ಣ ವಿಶ್ವಾಸದಲ್ಲಿದ್ದ ಉಗ್ರಪ್ಪ ಬಳ್ಳಾರಿಯಲ್ಲೇ ಮನೆ ಮಾಡಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಸಂಡೂರಿನ ಶಾಸಕ ತುಕಾರಾಂಗೆ ಟಿಕೆಟ್ ಘೋಷಿಸಿತು. ಇದು ಉಗ್ರಪ್ಪ ಅವರ ಬೇಸರಕ್ಕೂ ಕಾರಣವಾಗಿಸಿದ್ದು, ಜಿಲ್ಲೆಯ ಕಾಂಗ್ರೆಸ್ ಸಹವಾಸದಿಂದಲೇ ದೂರ ಸರಿದಿದ್ದಾರೆ.

ಪಕ್ಷಗಳ ಮೂಲಗಳ ಪ್ರಕಾರ ಉಗ್ರಪ್ಪಗೆ ಪಕ್ಷದ ಕಾನೂನಾತ್ಮಕ ಕೆಲಸಗಳ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಚಾರಕ್ಕೂ ಸೂಚಿಸಲಾಗಿದೆ. ಒಲ್ಲದ ಮನಸ್ಸಿನೊಂದಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಬದಲು, ರಾಜ್ಯ ಸಮಿತಿ ಸೂಚನೆಯ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕಾಗಿ ಚುನಾವಣೆ ಪ್ರಚಾರ ಮುಗಿಯುವ ಹೊತ್ತಿಗೆ ಒಂದೆರೆಡು ದಿನ ಬಳ್ಳಾರಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದೇವೇಂದ್ರಪ್ಪ ಪ್ರಚಾರದಿಂದ ದೂರ:

ಮಾಜಿ ಸಂಸದ ಹಾಗೂ ಈ ಬಾರಿ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದ ವೈ.ದೇವೇಂದ್ರಪ್ಪ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಹೆಸರಿನಲ್ಲಿಯೇ ಗೆಲುವು ದಕ್ಕಿಸಿಕೊಂಡು ಲೋಕಸಭೆ ಪ್ರವೇಶಿಸಿದ್ದ ದೇವೇಂದ್ರಪ್ಪ ಈ ಬಾರಿಯೂ ಮೋದಿ ಅಲೆಯಲ್ಲೇ ಗೆಲ್ಲುವ ಕನಸು ಕಂಡಿದ್ದರು. ಆದರೆ, ಜಿದ್ದಾಜಿದ್ದಿನ ಕಣವಾದ ಬಳ್ಳಾರಿಯಲ್ಲಿ ಶ್ರೀರಾಮುಲು ಅವರನ್ನು ಪಕ್ಷ ಅಖಾಡಕ್ಕಿಳಿಸಿತು. ಈ ಬೆಳವಣಿಗೆ ದೇವೇಂದ್ರಪ್ಪಗೆ ತೀವ್ರ ನಿರಾಸೆಯನ್ನುಂಟು ಮಾಡಿತು. ನಾಮಪತ್ರ ಸಲ್ಲಿಕೆ ಮುನ್ನವೇ ಬಿಜೆಪಿ ಪ್ರಚಾರ ಶುರುಗೊಳಿಸಿದ್ದರೂ ದೇವೇಂದ್ರಪ್ಪ ಎಲ್ಲೂ ಕಾಣಿಸಿಕೊಂಡಿಲ್ಲ.

ಈ ಚುನಾವಣೆಯಲ್ಲಿ ಮಾಜಿ ಸಂಸದರು ಎಷ್ಟರ ಮಟ್ಟಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ಕುತೂಹಲವೂ ಪಕ್ಷದ ವಲಯದಲ್ಲಿದೆ.

ನನಗೆ ಪಕ್ಷದ ಅನೇಕ ಜವಾಬ್ದಾರಿಗಳನ್ನು ನೀಡಿದೆ. ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದೆರೆಡು ದಿನ ಬಂದು ಹೋಗುವುದಾಗಿ ಪಕ್ಷದ ಅಭ್ಯರ್ಥಿಗೆ ತಿಳಿಸಿದ್ದೇನೆ. ಬಳ್ಳಾರಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಿಷ್ಠವಿದೆ. ನಮ್ಮ ಅಭ್ಯರ್ಥಿ ಗೆಲುವು ಖಚಿತ ಎನ್ನುತ್ತಾರೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ.

ಈವರೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಇನ್ಮುಂದೆ ತೊಡಗಿಸಿಕೊಳ್ಳಬೇಕು. ನಾಮಪತ್ರ ಸಲ್ಲಿಕೆ ದಿನ ಬಳ್ಳಾರಿಗೆ ಬಂದಿದ್ದೆ. ಆದರೆ, ತೀವ್ರ ಬಿಸಿಲಿದ್ದ ಕಾರಣ ಕಾರಲ್ಲೇ ಇದ್ದೆ. ಇಡೀ ದೇಶದಲ್ಲಿ ಮೋದಿ ಅಲೆಯಿದೆ. ಶ್ರೀರಾಮುಲು ಸಮರ್ಥ ನಾಯಕರಾಗಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ ಎನ್ನುತ್ತಾರೆ ಮಾಜಿ ಸಂಸದ ವೈ.ದೇವೇಂದ್ರಪ್ಪ.