ಉಜಿರೆ ಎರ್ನೋಡಿಯಿಂದ ಚಾರ್ಮಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ತನಕ 13 ಎಕರೆ ಸರ್ಕಾರಿ ಜಾಗವಿದ್ದು ಇದನ್ನು ಕಂದಾಯ ಇಲಾಖೆ ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಗ್ರಾಮಸ್ಥರು ಉಜಿರೆ ಗ್ರಾಪಂ ಸಭೆಯಲ್ಲಿ ಆಗ್ರಹಿಸಿದರು.

ಕನ್ನಡಪ್ರಭವಾರ್ತೆ ಬೆಳ್ತಂಗಡಿ

ಉಜಿರೆ ಎರ್ನೋಡಿಯಿಂದ ಚಾರ್ಮಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ತನಕ 13 ಎಕರೆ ಸರ್ಕಾರಿ ಜಾಗವಿದ್ದು ಇದನ್ನು ಕಂದಾಯ ಇಲಾಖೆ ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಗ್ರಾಮಸ್ಥರು ಉಜಿರೆ ಗ್ರಾಪಂ ಸಭೆಯಲ್ಲಿ ಆಗ್ರಹಿಸಿದರು.

ಶುಕ್ರವಾರ ಪಂಚಾಯಿತಿ ಸಭಾಭವನದಲ್ಲಿ ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ್ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಜರಗಿತು.

ಕಂದಾಯ ಜಾಗ ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಉಜಿರೆಯಲ್ಲಿ ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸುವುದರಿಂದ ಜನಸಾಮಾನ್ಯರು ನಡೆದಾಡಲು ಪರದಾಡುವ ಸ್ಥಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ಜಗದೀಶ್ ಪ್ರಸಾದ್ ಆಗ್ರಹಿಸಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಸೂಕ್ತ ವ್ಯವಸ್ಥೆ ಕೈಗೊಳ್ಳುವುದಾಗಿ ಸಭೆಗೆ ತಿಳಿಸಲಾಯಿತು.

ದಲ್ಲಾಳಿ ಹಾವಳಿ ವಿಪರೀತ: ಗ್ರಾಮಸ್ಥ ಬೊಳಿಂಬಿ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ಜನಸಾಮಾನ್ಯರ ಕೆಲಸಗಳು ನಡೆಯುವಲ್ಲಿ ವಿಳಂಬವಾಗುತ್ತಿದೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಸೂಕ್ತ ಕ್ರಮ ವಹಿಸಲು ಆಗ್ರಹ ವ್ಯಕ್ತವಾಯಿತು. ಇಲಾಖಾಧಿಕಾರಿಗಳ ಗೈರಿನ ಕುರಿತು ಗ್ರಾಮಸ್ಥರು ಆಕ್ಷೇಪಿಸಿದರು.

ಸಭೆಗೆ ಹಾಜರಾಗದ ಇಲಾಖೆಗಳಿಗೆ ನೋಟಿಸ್‌ ನೀಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಉಜಿರೆ ಪಂಚಾಯಿತಿಗೆ ಸ್ವಂತ ಜಾಗ ಇಲ್ಲ ಎಂಬ ಕುರಿತು ಚರ್ಚೆ ನಡೆಯಿತು.

ಪಿಡಿಒ ರಾಘವೇಂದ್ರ ಪಾಟೀಲ್ ಸ್ವಾಗತಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ ಜಮಾ ಖರ್ಚು ವಾಚಿಸಿ, ಸಿಬ್ಬಂದಿ ರಮೇಶ್ ನಾಯ್ಕ ಅನುಪಾಲನಾ ವರದಿ ವಾಚಿಸಿದರು. ಉಮೇಶ್ ಗೌಡ ನಿವೇಶನ ರಹಿತರ ವಿವರ ನೀಡಿದರು. ಮೋಹನ್ ಎಚ್. ಬಿ. ನಳ್ಳಿ ನೀರು ಸಂಪರ್ಕದ ವಿವರ ನೀಡಿದರು.

ರವಿ ಮುಂಡತ್ತೋಡಿ, ಸಿ.ಕೆ.ಚಂದ್ರಕಲಾ,ರವಿಕುಮಾರ್ ಬರೆಮೇಲು, ಉಷಾಕಿರಣ ಕಾರಂತ್, ಮುರಳೀಧರ, ಶ್ರೀನಿವಾಸ ಮೊದಲಾದವರು ಗ್ರಾಮದ ಸಮಸ್ಯೆಗಳ ಕುರಿತು ಚರ್ಚಿಸಿದರು.

ಅರಣ್ಯ ನೀತಿ ಅಡ್ಡಿ: ಗ್ರಾಮದ ಅರಳು ಎಂಬಲ್ಲಿ 8 ಎಕರೆ ಜಾಗವನ್ನು ನಿವೇಶನ ರಹಿತರಿಗೆ ಗುರುತಿಸಲಾಗಿದೆ. ಇಲ್ಲಿ 600ಕ್ಕಿಂತ ಅಧಿಕ ಮರಗಳಿದ್ದು ಅವುಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡದೆ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸಮಸ್ಯೆ ಉಂಟಾಗಿದೆ. 2012ರಲ್ಲಿ ನಿವೇಶನ ಜಾಗ ಗುರುತಿಸಲಾಗಿದ್ದು ಅದರ ಪ್ರಕ್ರಿಯೆ ಮುಂದುವರಿದಿಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಲಾಯಿತು.