ಉಜಿರೆ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಪೂರ್ಣ

| Published : Feb 14 2025, 12:30 AM IST

ಉಜಿರೆ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ-ಪೆರಿಯಶಾಂತಿ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್‌ಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿದೆ. ಹೆದ್ದಾರಿ ಸಚಿವಾಲಯ 613.65 ಕೋಟಿ ರು. ಅನುದಾನವಿಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಮುಗೇರೋಡಿ ಸಂಸ್ಥೆ 315 ಕೋಟಿ ರು.ಗೆ ಟೆಂಡರ್ ಹಾಕಿ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಹು ನಿರೀಕ್ಷಿತ ಮತ್ತು ಬಹು ಅಪೇಕ್ಷಿತ ಉಜಿರೆ- ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು 315 ಕೋಟಿ ರು. ವೆಚ್ಚದಲ್ಲಿ ಕೆಲಸ ಪ್ರಾರಂಭವಾಗಲಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ-ಪೆರಿಯಶಾಂತಿ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್‌ಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿದೆ.

ಹೆದ್ದಾರಿ ಸಚಿವಾಲಯ 613.65 ಕೋಟಿ ರು. ಅನುದಾನವಿಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಮುಗೇರೋಡಿ ಸಂಸ್ಥೆ 315 ಕೋಟಿ ರು.ಗೆ ಟೆಂಡರ್ ಹಾಕಿ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದೆ. ರಸ್ತೆ ಕಾಮಗಾರಿ 5 ವರ್ಷಗಳೊಳಗೆ ಮುಗಿಯಲಿದೆ.

24 ಕಿ.ಮೀ. ದ್ವಿಪಥ ಮತ್ತು 4 ಕಿ.ಮೀ. ಚತುಷ್ಪಥ:

ಈಗಾಗಲೇ ಉಜಿರೆ-ಪೆರಿಯಶಾಂತಿ ರಸ್ತೆ ಹಲವು ತಿರುವುಗಳು, ಕಡಿದಾದ ರಸ್ತೆಗಳು ಅಲ್ಲಲ್ಲಿ ಹೊಂದಿವೆ. ಇವುಗಳಲ್ಲಿ ತಿರುವುಗಳು ನೇರವಾಗಲಿವೆ. ಅಲ್ಲದೆ 28.49 ಕಿ.ಮೀ. ರಸ್ತೆಯಲ್ಲಿ ಉಜಿರೆಯ ಸಿದ್ದವನದಿಂದ ನೇತ್ರಾವತಿಯವರೆಗೆ 4 ಕಿ.ಮೀ.ನಷ್ಟು ಚತುಷ್ಪಥ ಮತ್ತು ಉಳಿದ 24 ಕಿಲೋ ಮೀಟರ್ ರಸ್ತೆ ದ್ವಿಪಥವನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತದೆ.

ಇದರ ಜೊತೆಗೆ ಮಾರ್ಗದ ಎರಡೂ ಬದಿಯಲ್ಲೂ ಪೇವ್ಡ್ ಶೋಲ್ಡರ್ ಮಾದರಿಯ ವ್ಯವಸ್ಥೆಯೂ ಇರಲಿದೆ.

ಧರ್ಮಸ್ಥಳ ಮಹಾದ್ವಾರದ ಬಳಿ ಅಂಡರ್‌ಪಾಸ್:

ಪ್ರತಿದಿನ ಸಾವಿರಾರು ಮಂದಿ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಜನರ ಒತ್ತಡ ನಿವಾರಿಸಲು ಧರ್ಮಸ್ಥಳದ ಮಹಾದ್ವಾರದ ಬಳಿ ಅಂಡರ್‌ಪಾಸ್ ನಿರ್ಮಾಣದ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಬೆಂಗಳೂರಿನ ಮೆಜೆಸ್ಟಿಕ್ ಮಾದರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿ ಭಕ್ತರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಸ್‌ನಿಂದ ಇಳಿಯುವ ಭಕ್ತರು ಅಂಡರ್‌ಪಾಸ್ ಮೂಲಕ ನೇತ್ರಾವತಿ ಕಡೆಗೆ ಮತ್ತು ದೇವಸ್ಥಾನದ ಕಡೆಗೆ ಸಾಗಲು ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯಿದೆ.

ಮೂರು ಹೊಸ ಸೇತುವೆಗಳು:

ಉಜಿರೆಯಿಂದ - ಪೆರಿಯಶಾಂತಿ ರಸ್ತೆಯಲ್ಲಿನ ಧರ್ಮಸ್ಥಳದ ನೇತ್ರಾವತಿ, ಪಾರ್ಪಿಕಲ್ಲು ಮತ್ತು ನಿಡ್ಲೆಯಲ್ಲಿ ಮೂರು ಸೇತುವೆಗಳು ನಿರ್ಮಾಣವಾಗಲಿವೆ. ಇದರ ಜೊತೆಗೆ ಒಂದು ಚಿಕ್ಕ ಸೇತುವೆಯ ಕಾಮಗಾರಿ ನಡೆಯಲಿದೆ. 37 ಸ್ಲಾಬ್ ಮೋರಿ, 12 ಬಾಕ್ಸ್ ಮೋರಿ, 28 ಪೈಪ್ ಕಲ್ವರ್ಟ್ಸ್ ಮೋರಿಗಳ ಕಾಮಗಾರಿ ನಡೆಯಲಿದೆ. ಇದರ ಜೊತೆಗೆ ಕ್ರಾಸ್ ರೋಡ್ ಬಾಕ್ಸ್ ಕಲ್ಪರ್ಟ್ಸ್‌ಗಳ ಪೈಕಿ 65 ಹೊಸತಾಗಿ ಕಾಮಗಾರಿ ಮಾಡಲಾಗುತ್ತದೆ. ಇದರಲ್ಲಿ 3 ಪ್ರಮುಖ ಜಂಕ್ಷನ್‌ಗಳು, 63 ಸಣ್ಣ ಜಂಕ್ಷನ್‌ಗಳನ್ನಾಗಿ ಗುರುತಿಸಲಾಗಿದೆ.

ವಿದ್ಯುದೀಪಗಳ ಅಳವಡಿಕೆ:

ಎಲ್ಲಾ ಪೇಟೆಗಳಲ್ಲಿ, ಮುಖ್ಯವಾಗಿ ಕನ್ಯಾಡಿ, ರಾಮಮಂದಿರ, ಸ್ನಾನಘಟ್ಟ, ಧರ್ಮಸ್ಥಳ, ನಿಡ್ಲೆ, ಕೊಕ್ಕಡ ಮುಂತಾದ ಭಾಗಗಳಲ್ಲಿ ವಿದ್ಯುದ್ದೀಪ ಅಳವಡಿಸಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗುಡ್ಡ ಕುಸಿತವಾಗುವ ಭೀತಿ ಇರುವಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ರಕ್ಷಣಾ ಗೋಡೆ ನಿರ್ಮಾಣದ ಕಾಮಗಾರಿಯೂ ನಡೆಯಲಿದೆ.

ಹ್ಯಾಮ್ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ:

ಹೈಬ್ರಿಡ್ ಆನ್ವಿಟಿ ಮೋಡ್(ಹ್ಯಾಮ್) ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ಆಗಿದ್ದು ಗುತ್ತಿಗೆದಾರರಿಗೆ ಐದು ವರ್ಷಗಳಲ್ಲಿ ಹಂತ ಹಂತವಾಗಿ ನಿರ್ವಹಿಸಿದ ಕಾಮಗಾರಿಗೆ ಬಿಲ್ ಪಾವತಿಸಲಾಗುವುದು. ರಸ್ತೆಗೆ ಬೇಕಾದ ಶೇ. 66 ರಷ್ಟು ಭೂಮಿ ಸರ್ಕಾರದ ವಶದಲ್ಲಿದ್ದು ಉಳಿದ ಭೂಮಿಯನ್ನು ಖಾಸಗಿದಾರರಿಂದ ಪರಿಹಾರ ನೀಡಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ. ಅರಣ್ಯ ಭೂಮಿಗೆ ತತ್ಸಮಾನವಾಗಿ ಅರಣ್ಯ ಭೂಮಿಯನ್ನು ಅಭಿವೃದ್ಧಿ ಪಡಿಸಲು ಬೇಕಾದ ಹೆಚ್ಚುವರಿ ಭೂಮಿ ನೀಡಿ ಅದನ್ನು ನಿಯಮಾನುಸಾರ ಪಡೆದುಕೊಳ್ಳಲು ಕೇಂದ್ರ ನಿರ್ಧರಿಸಿದೆ.

ಈ ಮೂಲಕ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯನ್ನು ಡಿಪಿ ಜೈನ್ ಕಂಪನಿಯಿಂದ ಬ್ಯಾಕ್ ಟು ಬ್ಯಾಕ್ ಮಾದರಿಯಲ್ಲಿ ಟೆಂಡರ್ ಪಡೆದಿರುವ ಮುಗ್ರೋಡಿ ಕನ್ಸ್ ಟ್ರಕ್ಷನ್ ಕಂಪನಿ ವೇಗವಾಗಿ ಕೆಲಸ ನಿರ್ವಹಿಸುತ್ತಿದೆ. ಈಗ ಮತ್ತೊಂದು ಮಹತ್ವದ ಯೋಜನೆಯ ಜವಾಬ್ದಾರಿ ಸಿಕ್ಕಿದ್ದು ಜನರು ರಸ್ತೆ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.

-------

ಹೆದ್ದಾರಿಯ ಟೆಂಡರ್‌ನಲ್ಲಿ ಎಂಟು ಗುತ್ತಿಗೆದಾರರು ಭಾಗಿಯಾಗಿದ್ದರು. ಅದರಲ್ಲಿ ಏಳು ಗುತ್ತಿಗೆದಾರರು ತಾಂತ್ರಿಕವಾಗಿ ಅರ್ಹತೆ ಪಡೆದಿದ್ದರು. ಆದರೆ ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್‌ನ ಸುಧಾಕರ್ ಶೆಟ್ಟಿ ಹಾಕಿರುವ ಬಿಡ್ ಕಡಿಮೆ ಆಗಿರುವುದರಿಂದ ಅವರಿಗೆ ಟೆಂಡರ್ ಅನುಮೋದನೆಗೊಂಡಿದೆ.

-ಶಿವಪ್ರಸಾದ್ ಅಜಿಲ, ಕಾರ್ಯನಿರ್ವಾಹಕ ಅಭಿಯಂತರ, ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ., ಕೊಡಗು