ಉಜಿರೆ ರತ್ನಮಾನಸ: ‘ಕಲಾಬ್ಧಿ 2025’ ಬೇಸಿಗೆ ಶಿಬಿರ ಉದ್ಘಾಟನೆ

| Published : Apr 08 2025, 12:31 AM IST

ಉಜಿರೆ ರತ್ನಮಾನಸ: ‘ಕಲಾಬ್ಧಿ 2025’ ಬೇಸಿಗೆ ಶಿಬಿರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ 7 ದಿನಗಳ ಬೇಸಿಗೆ ಶಿಬಿರ ‘ಕಲಾಬ್ಧಿ -2025’ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ನೀಡುತ್ತಿರುವ ರತ್ನಮಾನಸ ಪರಿಣಾಮಕಾರಿ, ಪ್ರಯೋಜನಕಾರಿ ಚಟುವಟಿಕೆಗಳ ಮೂಲಕ ರಾಷ್ಟ್ರಕ್ಕೆ ಮಾದರಿ ವಿದ್ಯಾರ್ಥಿ ನಿಲಯವಾಗಿ ಹೆಸರು ಪಡೆದಿದೆ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದ್ದಾರೆ.

ಶುಕ್ರವಾರ, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ 7 ದಿನಗಳ ಬೇಸಿಗೆ ಶಿಬಿರ ‘ಕಲಾಬ್ಧಿ -2025’ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಬೇರೆ ಬೇರೆ ಕಡೆಯ ಆರ್ಥಿಕವಾಗಿ ಹಿಂದುಳಿದ , ಬಡ ವಿದ್ಯಾರ್ಥಿಗಳಿಗೆ ಸೆಕೆಂಡರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಕೆಯ ಜತೆಗೆ ಜೀವನ ಶಿಕ್ಷಣ ನೀಡುತ್ತಿರುವ ರತ್ನಮಾನಸದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಅವರು ಮುಂದೆ ಯಶಸ್ವೀ ಜೀವನ ನಡೆಸಿದ ಅನೇಕ ನಿದರ್ಶನಗಳಿವೆ ಎಂದರು.

ಪತ್ರಕರ್ತ ಮನೋಹರ ಬಳಂಜ ಮಾತನಾಡಿ, ಕಲೆಯ ಆಸಕ್ತಿಯಿದ್ದರೆ ಶಿಕ್ಷಣ ಬೆಳೆಯುತ್ತದೆ. ಶಿಬಿರದಲ್ಲಿ ಮುಕ್ತವಾಗಿ ಭಾಗವಹಿಸಿ, ಪೂರ್ಣವಾಗಿ ತೊಡಗಿಸಿಕೊಂಡು, ಅದರ ಮೌಲ್ಯವನ್ನು ಅನುಭವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ರತ್ನಮಾನಸದ ಪಾಲಕ ಯತೀಶ್ ಕುಮಾರ ಬಳಂಜ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದ ಸಂಯೋಜಕ ವಿನ್ಯಾಸ್ ಭಂಡಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಿತೀಶ್ ನಿರೂಪಿಸಿದರು. ಸಹಪಾಲಕ ರವಿಚಂದ್ರ ಸ್ವಾಗತಿಸಿದರು. ಸಮ್ಯಕ್‌ ವಂದಿಸಿದರು.

ಏ.11ರ ವರೆಗೆ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಯಶವಂತ ಬೆಳ್ತಂಗಡಿ, ಸುನಿಲ್ ಕಲ್ಕೊಪ್ಪ ಮತ್ತು ಮದನ್ ಎಂ ಅವರಿಂದ ಭಜನೆಯಲ್ಲಿ ಅಳವಡಿಸಬೇಕಾದ ಶಿಸ್ತುಕ್ರಮಗಳು ಮತ್ತು ತರಬೇತಿ, ನಾಟಕ ಸಂಯೋಜನೆ/ಪ್ರಾತ್ಯಕ್ಷಿಕೆ, ಅರೆ ಶಾಸ್ತ್ರೀಯ ನೃತ್ಯ ಅಭ್ಯಾಸಗಳು, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಜಾನಪದ ನೃತ್ಯ ಮಾಹಿತಿ ಹಾಗು ಅಭ್ಯಾಸ, ರಂಗಗೀತೆಯ ಅಭ್ಯಾಸ , ಸಂಸ್ಕಾರ-ಸಂಸ್ಕೃತಿ ಪರಿಚಯ, ಧರ್ಮಸ್ಥಳ ಸಂಸ್ಥೆಗಳ ಸಾಧನೆಗಳು, ಜೀವನ ಮೌಲ್ಯಗಳು, ನಾಟಕ ಸಂಯೋಜನೆ, ಮಂಕುತಿಮ್ಮನ ಕಗ್ಗದಲ್ಲಿ ವಿದ್ಯಾರ್ಥಿ ಮೌಲ್ಯಗಳು,ಜಾನಪದ ನೃತ್ಯ ಅಭ್ಯಾಸ,ಭಜನೆಯ ಅಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.