1000 ವರ್ಷಗಳಷ್ಟು ಇತಿಹಾಸವಿರುವ ಉಜಿರೆಯ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶೋತ್ಸವ ಸಮಾರಂಭವು ಮಾ. 2ರಿಂದ 11ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಕೀರ್ತಿಶೇಷ ಯು. ವಿಜಯ ರಾಘವ ಪಡ್ವೆಟ್ನಾಯ ಅವರ ಕನಸು ಮತ್ತು ಸಂಕಲ್ಪದಂತೆ ಭಕ್ತರ ಸಹಕಾರದಿಂದ ನೂತನ ರಾಜಗೋಪುರ ‘ವಿಜಯಗೋಪುರ’ ನಿರ್ಮಾಣವಾಗಿದ್ದು, ಇದರ ಲೋಕಾರ್ಪಣೆ ಕಾರ್‍ಯಕ್ರಮನಡೆಯಲಿದೆ. ಈಗಾಗಲೇ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಬೆಳ್ತಂಗಡಿ: 1000 ವರ್ಷಗಳಷ್ಟು ಇತಿಹಾಸವಿರುವ ಉಜಿರೆಯ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶೋತ್ಸವ ಸಮಾರಂಭವು ಮಾ. 2ರಿಂದ 11ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಕೀರ್ತಿಶೇಷ ಯು. ವಿಜಯ ರಾಘವ ಪಡ್ವೆಟ್ನಾಯ ಅವರ ಕನಸು ಮತ್ತು ಸಂಕಲ್ಪದಂತೆ ಭಕ್ತರ ಸಹಕಾರದಿಂದ ನೂತನ ರಾಜಗೋಪುರ ‘ವಿಜಯಗೋಪುರ’ ನಿರ್ಮಾಣವಾಗಿದ್ದು, ಇದರ ಲೋಕಾರ್ಪಣೆ ಕಾರ್‍ಯಕ್ರಮನಡೆಯಲಿದೆ. ಈಗಾಗಲೇ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಸೋಮವಾರ ಕೃಷ್ಣಾನುಗ್ರಹ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 2ರಂದು ಬ್ರಹ್ಮಕಲಶೋತ್ಸವ ಕಾರ್‍ಯಾಲಯದ ಉದ್ಘಾಟನೆ ನಡೆಯಲಿದೆ. ಅಂದು ಹಂಗಾರಕಟ್ಟೆಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಆಶೀರ್ವಚನ ನೀಡುವರು.3ರಂದು ಗ್ರಹಣ ಇರುವುದರಿಂದ ಯಾವುದೇ ಕಾರ್‍ಯಕ್ರಮಗಳು ಇರುವುದಿಲ್ಲ. ಮಾ. 4ರಂದು ಎಡನೀರು ಮಠದ ಶ್ರೀಗಳ ಸಮ್ಮುಖದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿಜಯ ಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ರೀತಿ ಉಜಿರೆಯ ಕಿರಣ್ ರಾವ್ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಬ್ರಹ್ಮರಥದ ಸಮರ್ಪಣೆ ಮತ್ತು ಬೆನಕ ಕನ್‌ಸ್ಟ್ರಕ್ಷನ್ಸ್‌ನ ಶ್ರೀ ಗಣೇಶ್ ಗೌಡ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಪುಷ್ಪರಥದ ಸಮರ್ಪಣೆಯು ದಿನಾಂಕ ಮಾ. 8ರಂದು ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಗಳ ಅಮೃತಹಸ್ತದಿಂದ ನಡೆಯಲಿದೆ. ಹಾಗೆಯೇ ಮಾ.11ರಂದು ತಾರೀಕಿನಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀಗಳು, ಉಡುಪಿಯ ಶ್ರೀ ಸೋದೆಶ್ರೀಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ, ಶಶಿಧರ್ ಶೆಟ್ಟಿ ಅವರ ಕಾರ್‍ಯಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಈ ಎಲ್ಲ ಧಾರ್ಮಿಕ ಕಾರ್‍ಯಕ್ರಮಗಳು ತಂತ್ರಿವರೇಣ್ಯರಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿವೆ.10 ದಿನಗಳ ಕಾಲ ನಡೆಯುವ ಸಭಾ ಕಾರ್‍ಯಕ್ರಮದಲ್ಲಿ ಮೂಡುಬಿದಿರೆಯ ಡಾ. ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾರ್ಯವರ್ಯ ಶ್ರೀಗಳು, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ರಾಮಚಂದ್ರಾ ಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ, ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕನ್ಯಾಡಿಯ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡುವರು. ಡಾ. ಮೋಹನ ಆಳ್ವ ಅವರು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಉದ್ಘಾಟಿಸುವರು.
ಪ್ರತಿ ನಿತ್ಯ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಲಿವೆ. ಶ್ರೀ ಕೃಷ್ಣಾನುಗ್ರಹ ವೇದಿಕೆ ಮತ್ತು ಪ್ರಧಾನ ವೇದಿಕೆ ‘ಸುದರ್ಶನ’ದಲ್ಲಿ ಕಾರ್‍ಯಕ್ರಮಗಳು ನಡೆಯಲಿವೆ. ಜೊತೆಗೆ ಸುನಾದ ಭಜನಾ ಕುಟೀರದಲ್ಲಿ ನಿರಂತರ ಭಜನಾ ಸೇವೆ ನಡೆಯಲಿದೆ. ವಿವಿಧ ಸಂಘ ಸಂಸ್ಥೆಯವರು ಮತ್ತು ಭಕ್ತರು ಹೊರೆಕಾಣಿಕೆಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಿದ್ದಾರೆ. ಈ ಎಲ್ಲ ಕಾರ್‍ಯಗಳು ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಅನೇಕ ಸಮಿತಿಗಳನ್ನು ರಚಿಸಿದ್ದೇವೆ. ವಿಶೇಷವಾಗಿ ಭೋಜನ ಶಾಲೆಯ ನಿರ್ಮಾಣವಾಗಿದೆ.ರಾಜಗೋಪುರ ನಿರ್ಮಾಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದಲ್ಲಿ ಊರವರ ಮತ್ತು ಭಕ್ತರ ಸಂಪೂರ್ಣ ಸಹಕಾರದಿಂದ ಈ ಬ್ರಹ್ಮಕಲಶೋತ್ಸವ ವಿಶೇಷ ರೀತಿಯಲ್ಲಿ ನಡೆಯಲಿದೆ. ಭಗವಂತನ ಸೇವೆ ಮಾಡುವುದಕ್ಕೆ ಭಕ್ತರಿಗೆ ಅವಕಾಶವಿದ್ದು, ಕಲಶ ಸೇವೆ, ಅನ್ನದಾನ ಸೇವೆ ಮತ್ತು ತ್ರಿಕರಣಪೂರ್ವಕವಾದ ಯಾವುದೇ ವಿಧವಾದ ಸೇವೆ ಮಾಡುವವರು ದೇವಸ್ಥಾನದ ಕಾರ್‍ಯಾಲಯವನ್ನು ಸಂಪರ್ಕಿಸಬಹುದು. ಈಗಾಗಲೇ ಮೋಹನ್ ಕುಮಾರ್ ನೇತೃತ್ವದಲ್ಲಿ ಅಲಂಕಾರ, ಶ್ರಮದಾನಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿವೆ. ಮಂಜುನಾಥ್ ಕನ್ಯಾಡಿ ಅವರ ಸಂಚಾಲಕತ್ವದ ಬೆಂಗಳೂರು ಸಮಿತಿ ವಿಶೇಷ ರೀತಿಯ ಸೇವಾ ಕಾರ್‍ಯದಲ್ಲಿ ಕೈಜೋಡಿಸಲಿದೆ. ಬರುವ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವಾಹನ ನಿಲುಗಡೆಗಾಗಿ ವಿವಿಧ ಕಡೆಗಳಲ್ಲಿ ಸುಮಾರು 8 ಎಕರೆ ಜಾಗ ನಿಗದಿಗೊಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪ್ ಸಿಂಹ ನಾಯಕ್ , ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ರಾಜಗೋಪುರ ನಿರ್ಮಾಣ ಸಮಿತಿ, ಉಪಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಪ್ರಧಾನ ಕಾರ್‍ಯದರ್ಶಿ ಲಕ್ಷ್ಮಣ ಸಪಲ್ಯ, ಬ್ರಹ್ಮಕಲಶೋತ್ಸವ ಕಾರ್‍ಯಕಾರಿ ಸಮಿತಿ ಕಾರ್‍ಯದರ್ಶಿ ರವೀಂದ್ರ ಶೆಟ್ಟಿ ಸುರಭಿ, ವೆಂಕಟರಮಣ ಶೆಟ್ಟಿ, ಪ್ರಚಾರ ಸಮಿತಿಯ ಭಾಸ್ಕರ ಹೆಗಡೆ, ಪ್ರಕಾಶ್ ಮುದ್ದಣ್ಣಾಯ ಉಪಸ್ಥಿತರಿದ್ದರು....ಕೋಟ್....
2001ರಲ್ಲಿ ಹಾಗೂ 2013ರಲ್ಲಿ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಈ ಬಾರಿಯ ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಸುಮಾರು ಎರಡೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಉಜಿರೆ ಆಸುಪಾಸು ಸುಮಾರು 4,500 ಮನೆಗಳಿಗೆ ಇಲ್ಲಿನ ಆಡಳಿತ ಮೊಕ್ತೇಸರರೇ ಆಮಂತ್ರಣ ನೀಡಿದ್ದಾರೆ. ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಸಮಿತಿಯವರ ಕಲ್ಪನೆಯ ರೀತಿಯಲ್ಲೇ ಕೆಲಸ ಕಾರ್‍ಯಗಳು ನಡೆದಿವೆ.-ಪ್ರತಾಪಸಿಂಹ ನಾಯಕ್ , ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ
.....ಬಾಕ್ಸ್......ಮಾ. 8ರಂದು ಬೆಳಗ್ಗೆ ಶ್ರೀ ಜನಾರ್ದನ ದೇವರ ಪುನಃ ಪ್ರತಿಷ್ಠೆ, ಬ್ರಹ್ಮ ರಥ ಹಾಗೂ ಪುಷ್ಪರಥ ಸಮರ್ಪಣೆ, ಶ್ರೀ ಮಂಜುಳೇಶನಲ್ಲಿ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ, ಅಮ್ಮನವರಲ್ಲಿ ಬ್ರಹ್ಮಕಲಶಾಭಿಷೇಕ, ಗಣಪತಿಯಲ್ಲಿ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಾ. 11ರಂದು ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ, ಸಂಜೆ ನೂತನ ಬ್ರಹ್ಮರಥದಲ್ಲಿ ಉಭಯ ದೇವರ ಬ್ರಹ್ಮರಥೋತ್ಸವ ನೆರವೇರಲಿದೆ.