ಬೆಳ್ತಂಗಡಿ: ರಾಗದ್ವೇಷಗಳು ತುಂಬಿದಲ್ಲಿ ಪ್ರೀತಿ ದಾರಿತಪ್ಪುತ್ತದೆ. ಅದನ್ನು ಮೀರಿದಾಗ ಮಾತ್ರ ನಾವು ಆದರ್ಶ ಬದುಕು ಸಾಗಿಸಬಹುದು ಎಂದು ಒಡಿಯೂರಿನ ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ನುಡಿದರು.ಉಜಿರೆಯ ಶ್ರೀಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುದರ್ಶನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ವಿಶ್ವಾಸ ಮತ್ತು ಆತ್ಮವಿಶ್ವಾಸ ಎರಡೂ ಕರಾವಳಿ ಜನರ ಸಾಧನವಾಗಿದೆ. ವರ್ತಮಾನದಲ್ಲಿ ನಮ್ಮ ನಿರ್ಧಾರಗಳಲ್ಲಿ ಗಟ್ಟಿಯಾಗಿ ನಿಂತರೆ ಭವಿಷ್ಯದಲ್ಲಿ ನಾವು ಯೋಚಿಸಿದ ಹಾಗೆ ಆಗುತ್ತದೆ. ರಾಜನಂತೆ ಬದುಕಿ ಸನ್ಯಾಸಿಯಂತೆ ಯೋಚಿಸಬೇಕು. ಯಾಕೆಂದರೆ ಸನ್ಯಾಸಿಯಂತೆ ತ್ಯಾಗ ಮಾಡಲು ಅವನಿಗೆ ಗೊತ್ತಿದ್ದರೆ ಎಲ್ಲಿದ್ದರೂ ರಾಜನಂತೆ ಬದುಕಲು ಸಾಧ್ಯವಾಗುತ್ತದೆ ಎಂದರು.

ಬ್ರಹ್ಮಕಲಶೋತ್ಸವದ ಸಮಿತಿ ಕಾರ್ಯಾಧ್ಯಕ್ಷ ಶಶಿಧರಶೆಟ್ಟಿ, ಬರೋಡ ಮಾತಾನಾಡಿ,ಸಮಯ ಸಿಕ್ಕಾಗಲೆಲ್ಲಾ ದೇವರ ಕೆಲಸದಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು. ಆವಾಗಲೇ ಮನುಷ್ಯ ದೇವರ ಭಕ್ತಿಯಲ್ಲಿ ಲೀನವಾಗುತ್ತಾನೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂಸೇವಕ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಭಾರತ ಎಲ್ಲರನ್ನು ಒಂದೇ ಮನಸ್ಸಿನಲ್ಲಿ ಎಲ್ಲರೂ ಒಂದೇ ಎಂಬ ತತ್ವವನ್ನು ಸ್ವೀಕರಿಸಿದೆ. ಜಾತಿಯನ್ನು ದಾಟಿ ಗುಣದಿಂದ ಮೇಲೆ ಬರುವ ಹಾಗೆ ಸಂಕಲ್ಪ ಮಾಡಬೇಕು. ಜಾತಿಯನ್ನು ಪರಿಗಣಿಸದೆ ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯಲ್ಲಿ ಬದುಕಿದರೆ ಮಾತ್ರ ಜೀವನ ಆಶಾವಾದಿಯ ಮತ್ತು ಸಮಾನತೆಯ ಹಾದಿಯತ್ತ ಸಾಗುತ್ತದೆ ಎಂದರು.

ಭಗವದ್ಗೀತೆಯನ್ನು ಎಲ್ಲರ ಮನೆಯಲ್ಲಿ ಇಡುವ ಸಂಕಲ್ಪ ಮಾಡಬೇಕು. ಮನೆ ಮಂದಿಯಲ್ಲ ಒಟ್ಟಿಗೆ ಕೂತು ಶ್ಲೋಕ, ರಾಮಾಯಣ ಮತ್ತು ಮಹಾಭಾರತದ ಸುದೀರ್ಘವಾದ ಸಂವಾದವನ್ನು ಮಾಡಬೇಕು ಎಂದರು.ಸಂಸದ ಬ್ರಿಜೇಶ್‌ ಚೌಟ ಮಾತನಾಡಿ ಮಧ್ಯಪ್ರಾಚ್ಯ ದೇಶಗಳಲ್ಲಿ ದ.ಕ. ಜಿಲ್ಲೆಯ ಬಹುಸಂಖ್ಯೆಯ ನೆಲೆಸಿದ್ದಾರೆ. ಆದರೆ ಈಗ ಅವರು ಆತಂಕದಲ್ಲಿ ಜೀವಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲರ ಮನದಲ್ಲೂ ಶಾಂತಿಯ ಕಹಳೆಮೊಳಗಲಿ, ಯುದ್ಧ ಮಾಡುತ್ತಿರುವವರಿಗೆ ಸದ್ಬುದ್ಧಿಯನ್ನು ಭಗವಂತ ಕೊಡಲಿ ಎಂದರು.

ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ ಮನುಷ್ಯನಿಗೆ ಉಪಕಾರ ಬುದ್ಧಿ ಇರಬೇಕು. ನಮ್ಮಮನಸ್ಸು ಶುದ್ಧವಾಗಿದ್ದರೆ ನಮ್ಮಮಾತು ಸಹ ಸ್ವಷ್ಟವಾಗಿರುತ್ತದೆ. ದೇವರಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ದೇವಸ್ಥಾನದ ವಿನ್ಯಾಸ, ರಥ, ರಾಜಗೋಪುರವನ್ನುನಿರ್ಮಿಸಿರುವುದು ಸಾಕ್ಷಿಯಾಗಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಕೈಗಾರಿಕೋದ್ಯಮಿ ರಾಮದಾಸ ಮಡಮಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪಸಿಂಹನಾಯಕ್, ಕೆ.ಕೃಷ್ಣಸಂಪಿಗೆತ್ತಾಯ, ಜಯಂತಶೆಟ್ಟಿ, ರಾಜಪ್ರಸಾದ ರಾವ್, ಆನಂದ ಆಚಾರ್ಯ, ಬಾಬುಮೊಗೇರ, ಪುಷ್ಪಾ ಆರ್‌.ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಉಜಿರೆಯ ನಿವೃತ್ತ ಪ್ರಾಚಾರ್ಯ ಡಾ.ಬಿ.ಎ.ಕುಮಾರ ಹೆಗ್ಡೆ ನಿರೂಪಿಸಿದರು. ಬೆಂಗಳೂರು ಸಮಿತಿಯ ಸಂಚಾಲಕ ಮಂಜುನಾಥ ಕನ್ಯಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ ಶೆಟ್ಟಿ ನೊಚ್ಚ ವಂದಿಸಿದರು.