ಉಜಿರೆ: ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ

| Published : Aug 09 2025, 12:06 AM IST

ಸಾರಾಂಶ

ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ‘ಯಕ್ಷಾವತರಣ -6’ ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡುವೆಟ್ನಾಯ ಸಂಸ್ಮರಣೆ, ಯಕ್ಷಸಾಂಗತ್ಯ, ತಾಳಮದ್ದಳೆ ಸಪ್ತಾಹ, ಯಕ್ಷಧ್ರುವ ಪಟ್ಲ ಗಾನಯಾನ ರಜತ ಪರ್ವ ಉದ್ಘಾಟನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು ಯಕ್ಷಗಾನ ಕಲೆಗೆ ಆಶ್ರಯ, ಪ್ರೋತ್ಸಾಹ ನೀಡಿ ಬೆಳೆಸಿಕೊಂಡ ಹಿನ್ನೆಲೆ ಸಂತೋಷದಾಯಕ. ಅವರ ಆದರ್ಶ, ಒಳ್ಳೆಯ ಮೌಲ್ಯ ಪ್ರಸ್ತುತ ನಮಗೆ ಮಾರ್ಗದರ್ಶಕ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದ್ದಾರೆ.

ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಿಂದ ನಡೆದ ‘ಯಕ್ಷಾವತರಣ -6’ ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡುವೆಟ್ನಾಯ ಸಂಸ್ಮರಣೆ, ಯಕ್ಷಸಾಂಗತ್ಯ, ತಾಳಮದ್ದಳೆ ಸಪ್ತಾಹ, ಯಕ್ಷಧ್ರುವ ಪಟ್ಲ ಗಾನಯಾನ ರಜತ ಪರ್ವ ಉದ್ಘಾಟಿಸಿ ಅವರು ಮಾತನಾಡಿದರು.ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಪಡುವೆಟ್ನಾಯರು ಉಜಿರೆಯ ದನಿ ಹಾಗು ಧ್ವನಿ. ಊರಿನಲ್ಲಿ ಅವರಿಂದ ಸಾತ್ವಿಕ ವಾತಾವರಣ ನಿರ್ಮಾಣವಾಗಿದ್ದು ಅವರ ಸೌಮ್ಯತೆಯಿಂದ ಸಾವಿರಾರು ಕುಟುಂಬಗಳು ಅವರ ಆಶೀರ್ವಾದದಿಂದ ಬದುಕು ಕಟ್ಟಿಕೊಂಡು ಬಾಳುತ್ತಿದ್ದಾರೆ ಎಂದರು.ಯಕ್ಷಗಾನ ವಿಮರ್ಶಕ, ಕಲಾವಿದ, ಅರ್ಥಧಾರಿ ಪ್ರಭಾಕರ ಜೋಷಿ ಸಾಂಸ್ಥಿಕ ನೇತಾರ ವಿಜಯ ರಾಘವ ಪಡುವೆಟ್ನಾಯ ಮತ್ತು ಯಕ್ಷಧ್ರುವ ಪಟ್ಲ ಗಾನಯಾನ ರಜತ ಪರ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಾಶಂಸನೆ ನೆರವೇರಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಭಾಗವತ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಮೋಹನ್ ಶೆಟ್ಟಿಗಾರ್, ನ್ಯಾಯವಾದಿ ಬಿ.ಕೆ ಧನಂಜಯ ರಾವ್ , ಕುರಿಯ ಪ್ರತಿಷ್ಠಾನದ ಅಧ್ಯಕ್ಷ ಕುಮಾರಸ್ವಾಮಿ ಉಪಸ್ಥಿತರಿದ್ದರು. ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಕುಮಾರಸ್ವಾಮಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ವೀಳ್ಯ ನೀಡಿ ಸಪ್ತಾಹಕ್ಕೆ ಚಾಲನೆ ನೀಡಿದರು. ‘ವಿಭೀಷಣ ನೀತಿ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.