ಉಜ್ವಲ, ಸ್ವಾಧಾರಗೃಹಗಳಲ್ಲಿದ್ದ ನಿರಾಶ್ರಿತರು ಬೀದಿಪಾಲು..!

| Published : Jul 05 2024, 12:48 AM IST / Updated: Jul 05 2024, 12:49 AM IST

ಉಜ್ವಲ, ಸ್ವಾಧಾರಗೃಹಗಳಲ್ಲಿದ್ದ ನಿರಾಶ್ರಿತರು ಬೀದಿಪಾಲು..!
Share this Article
  • FB
  • TW
  • Linkdin
  • Email

ಸಾರಾಂಶ

ಉಜ್ವಲ ಕೇಂದ್ರ ಮತ್ತು ಸ್ವಾಧಾರ ಗೃಹಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸೇವೆಯನ್ನು ಮಾ.೩೧ರವರೆಗೆ ಸೀಮಿತಗೊಳಿಸಿ ಸರ್ಕಾರ ಅನುಮತಿ ನೀಡಿತ್ತು. ಏ.೧ರಿಂದ ಅನ್ವಯವಾಗುವಂತೆ ಸರ್ಕಾರದಿಂದ ಮಿಷನ್ ಶಕ್ತಿ ಯೋಜನೆಯಡಿ ಶಕ್ತಿಸದನ ಕೇಂದ್ರವನ್ನು ಅನುಷ್ಠಾನಗೊಳಿಸುವ ಭರವಸೆ ನೀಡಲಾಗಿತ್ತು.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾಧಾರ ಗೃಹ ಮತ್ತು ಉಜ್ವಲ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆಯಿಂದ ಮುಕ್ತಿಗೊಳಿಸಿ ಮೂರು ತಿಂಗಳಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಇನ್ನಿತರೆ ಸಮಸ್ಯೆಗಳಿಂದ ಬೇಸತ್ತು ಉಜ್ವಲ ಹಾಗೂ ಸ್ವಾಧಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ಇದೀಗ ಬೀದಿಪಾಲಾಗಿದ್ದಾರೆ.

ಉಜ್ವಲ ಕೇಂದ್ರ ಮತ್ತು ಸ್ವಾಧಾರ ಗೃಹಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸೇವೆಯನ್ನು ಮಾ.೩೧ರವರೆಗೆ ಸೀಮಿತಗೊಳಿಸಿ ಸರ್ಕಾರ ಅನುಮತಿ ನೀಡಿತ್ತು. ಏ.೧ರಿಂದ ಅನ್ವಯವಾಗುವಂತೆ ಸರ್ಕಾರದಿಂದ ಮಿಷನ್ ಶಕ್ತಿ ಯೋಜನೆಯಡಿ ಶಕ್ತಿಸದನ ಕೇಂದ್ರವನ್ನು ಅನುಷ್ಠಾನಗೊಳಿಸುವ ಭರವಸೆ ನೀಡಲಾಗಿತ್ತು.

೨೦೨೩-೨೪ನೇ ಸಾಲಿನ ಮಾರ್ಚ್ ೨೦೨೨೪ರ ವರೆಗೆ ಸ್ವಾಧಾರಗೃಹ ಹಾಗೂ ಉಜ್ವಲ ಕೇಂದ್ರಗಳಲ್ಲಿ ದಾಖಲಾಗಿರುವ ನಿವಾಸಿಗಳಲ್ಲಿ ಪುನರ್ವಸತಿ ಹೊಂದಬಹುದಾದ ನಿವಾಸಿಗಳು ಆಶ್ರಯದ ಅಗತ್ಯತೆ ಇರುವ ನಿವಾಸಿಗಳು ಹಾಗೂ ರಾಜ್ಯ ಮಹಿಳಾ ನಿಲಯ, ಸ್ವೀಕಾರ ಕೇಂದ್ರಗಳಲ್ಲಿ ಮುಂದಿನ ಪುನರ್ವಸತಿಗೆ ವರ್ಗಾಯಿಸಬಹುದಾದ ನಿವಾಸಿಗಳ ವಿವರವನ್ನು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ನೀಡಿದ ಸೂಚನೆಯಂತೆ ಸ್ವಯಂಸೇವಾ ಸಂಸ್ಥೆಗಳು ವಿವರವನ್ನು ನೀಡಿದ್ದವು. ಉಜ್ವಲ ಮತ್ತು ಸ್ವಾಧಾರ ಕೇಂದ್ರಗಳ ವರದಿಯನ್ನು ಪಡೆದುಕೊಂಡು ಮೂರು ತಿಂಗಳಾದರೂ ರಾಜ್ಯ ಸರ್ಕಾರ ಶಕ್ತಿ ಸದನ ತೆರೆಯುವ ಕುರಿತಂತೆ ಇದುವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆಯೂ ಸಲಹೆ-ಸೂಚನೆ ಎತ್ತಿಲ್ಲ. ಸರ್ಕಾರದ ನಿಲುವಿನಿಂದ ಈ ಕೇಂದ್ರಗಳಲ್ಲಿದ್ದ ನಿರಾಶ್ರಿತರು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಬೀದಿಗೆ ಬಿದ್ದಿದ್ದಾರೆ.

ಸ್ವಾಧಾರ ಗೃಹ ಹಾಗೂ ಉಜ್ವಲ ಕೇಂದ್ರಗಳನ್ನು ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಸೂಚನೆ ನಡುವೆಯೂ ಮಾನವೀಯತೆ ದೃಷ್ಟಿಯಿಂದ ಸರ್ಕಾರ ಪುನರ್ವಸತಿ ಕಲ್ಪಿಸಬಹುದೆಂಬ ಆಶಾಭಾವನೆಯೊಂದಿಗೆ ಈವರೆಗೆ ನಿರಾಶ್ರಿತರಿಗೆ ಕೇಂದ್ರಗಳಲ್ಲಿ ಆಶ್ರಯ ನೀಡಿದ್ದರು. ಆದರೆ, ಸರ್ಕಾರ ಶಕ್ತಿಸದನಗಳನ್ನು ತೆರೆಯುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನಿರಾಶ್ರಿತರಿಗೆ ಆಶ್ರಯಕೊಟ್ಟು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಸ್ವಯಂ ಸೇವಾ ಸಂಸ್ಥೆಯವರು ಕೇಂದ್ರಗಳಲ್ಲಿದ್ದವರ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರನ್ನು ಕರೆದುಕೊಂಡು ಹೋಗುವುದಕ್ಕೆ ಯಾರೂ ಬರುತ್ತಿಲ್ಲ. ಕೆಲವರನ್ನು ಬಲವಂತವಾಗಿ ಮನೆಗಳಿಗೆ ಕಳುಹಿಸಲಾಗುತ್ತಿದೆ. ಕೆಲವರು ಒಲ್ಲದ ಮನಸ್ಸಿನಿಂದ ಮನೆಗಳನ್ನು ಸೇರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವರು ನೆಲೆಯನ್ನೇ ಕಾಣದೆ ಬೀದಿಪಾಲಾಗಿದ್ದಾರೆ. ರಾಜ್ಯ ಸರ್ಕಾರದ ತಟಸ್ಥ ಧೋರಣೆಯಿಂದ ಕೇಂದ್ರಗಳಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಎಲ್ಲಿ ಪುನರ್ವಸತಿ ಕಲ್ಪಿಸಬೇಕೆಂಬುದು ತಿಳಿಯದೆ ಜಿಲ್ಲಾಡಳಿತ ಅಸಹಾಯಕತೆ ಪ್ರದರ್ಶಿಸುತ್ತಿದೆ.ಕೇಂದ್ರ-ರಾಜ್ಯ ಸರ್ಕಾರದ ಪಾಲುದಾರಿಕೆ

ಸ್ವಾಧಾರ ಗೃಹ ಮತ್ತು ಉಜ್ವಲ ಕೇಂದ್ರಗಳನ್ನು ಸ್ವಯಂಸೇವಾ ಸಂಸ್ಥೆಗಳು ನಿರ್ವಹಿಸುತ್ತಿದ್ದ ವೇಳೆ ಕೇಂದ್ರ ಶೇ.೬೦ರಷ್ಟು ಮತ್ತು ರಾಜ್ಯ ಸರ್ಕಾರ ಶೇ.೪೦ರಷ್ಟು ಪಾಲುದಾರಿಕೆ ನೀಡುತ್ತಿದ್ದವು. ತಲಾ ಒಂದೊಂದು ಕೇಂದ್ರಕ್ಕೆ ಮಾಸಿಕ ೬೦ ಸಾವಿರ ರು. ನೀಡಲಾಗುತ್ತಿತ್ತು. ಇದರಲ್ಲಿ ಕಟ್ಟಡದ ಬಾಡಿಗೆ, ಊಟ, ವಿದ್ಯುತ್, ಟೆಲಿಫೋನ್, ನೀರಿನ ಬಿಲ್‌ಗಳನ್ನು ನಿರ್ವಹಿಸಬೇಕಿತ್ತು. ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಸ್ವಯಂಸೇವಾ ಸಂಸ್ಥೆಗಳಿಗೆ ಅನುದಾನ ನೀಡಿರಲಿಲ್ಲ. ಇತ್ತೀಚೆಗೆ ಎರಡು ವರ್ಷದ ಅನುದಾನವನ್ನು ಒಟ್ಟಿಗೆ ನೀಡಿತ್ತು. ಇನ್ನೂ ಒಂದು ವರ್ಷದ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಿರಾಶ್ರಿತರನ್ನಿಟ್ಟುಕೊಂಡು ಕೇಂದ್ರಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದಿರುವುದರಿಂದ ಅವರನ್ನು ಹೊರಗೆ ಕಳುಹಿಸುವುದು ಅನಿವಾರ್ಯವಾಗಿದೆ.ಸ್ಥಾಪಿಸಿದ್ದ ಉದ್ದೇಶವೇನು?

ಸ್ವಾಧಾರ ಗೃಹ ಯೋಜನೆಯು ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಶ್ರಯ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡುವುದಾಗಿದ್ದರೆ, ಉಜ್ವಲ ಯೋಜನೆಯು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಹಾಗೂ ಸಾಗಾಣಿಕೆ, ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸಲು, ಪುನರ್ವಸತಿ ಕಲ್ಪಿಸಲು ಹಾಗೂ ಇವರುಗಳ ಕುಟುಂಬದೊಂದಿಗೆ ಪುನರ್‌ವಿಲೀನಗೊಳಿಸುವ ಉದ್ದೇಶವನ್ನು ಹೊಂದಿತ್ತು.

ಹೊರಗೆ ಕಳುಹಿಸದೆ ವಿಧಿ ಇಲ್ಲ

ಸ್ವಯಂ ಸೇವಾ ಸಂಸ್ಥೆಗಳಿಂದ ಸ್ವಾಧಾರ ಗೃಹ, ಉಜ್ವಲ ಕೇಂದ್ರಗಳ ನಿರ್ವಹಣೆಯನ್ನು ಮಾ.೩೧ಕ್ಕೆ ಸರ್ಕಾರ ಅಂತಿಮಗೊಳಿಸಿದೆ. ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಶಕ್ತಿ ಸದನಗಳನ್ನು ತೆರೆದು ಸರ್ಕಾರ ಪುನರ್ವಸತಿ ಕಲ್ಪಿಸಬಹುದೆಂಬ ಆಶಯದೊಂದಿಗೆ ಅವರಿಗೆ ಇಲ್ಲಿಯವರೆಗೆ ೨೩ ಮಂದಿಗೆ ಆಶ್ರಯ ನೀಡಿದ್ದೆವು. ಆದರೆ, ಸರ್ಕಾರದಿಂದ ಯಾವ ಕ್ರಮವೂ ಆಗಿಲ್ಲ. ನಮಗೆ ನಿರಾಶ್ರಿತರನ್ನಿರಿಸಿಕೊಂಡು ನಿರ್ವಹಣೆ ಮಾಡಲಾಗುತ್ತಿಲ್ಲ. ಅವರನ್ನು ಹೊರಗೆ ಕಳುಹಿಸದೆ ವಿಧಿಯಿಲ್ಲ. ಹಾಗಾಗಿ ಎಲ್ಲರನ್ನೂ ಬೀಳ್ಕೊಟ್ಟಿದ್ದೇವೆ.

- ಪುಟ್ಟಸ್ವಾಮಿ, ಅಧ್ಯಕ್ಷರು, ಅಕ್ಷಯ ನಿಕೇತನ ಸ್ವಾಧಾರಗೃಹಬೀದಿಗೆ ತಳ್ಳಬೇಡಿ

ಗಂಡನ ಕಿರುಕುಳ ತಾಳಲಾರದೆ ಕಷ್ಟವಾದರೂ ಮಗುವಿನೊಂದಿಗೆ ಇಲ್ಲಿಗೆ ಬಂದು ಆಶ್ರಯ ಪಡೆದಿದ್ದೆ. ಈಗ ಕೇಂದ್ರದ ಬಾಗಿಲು ಮುಚ್ಚುತ್ತಿದೆ. ನಾನಿಲ್ಲಿ ಸಮಾಧಾನದಿಂದ ಇದ್ದೆ. ಈಗ ಮಗುವನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕೆಂದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಒಂದು ಕೇಂದ್ರವನ್ನಾದರೂ ಜಿಲ್ಲೆಯಲ್ಲಿ ಉಳಿಸಿಕೊಡಿ. ನಮ್ಮನ್ನು ಬೀದಿಗೆ ತಳ್ಳಬೇಡಿ.

- ಅಶ್ವತಿ, ನಿರಾಶ್ರಿತೆ